ವ್ಯಾಟ್ಸನ್ ವೈಲಿ (ಅಮೆರಿಕ): ನಿರಂತರ ಮಳೆಯಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗುತ್ತಿದೆ. ಮಳೆ ನೀರು ನುಗ್ಗುತ್ತಿರುವುದರಿಂದ ರಸ್ತೆಗಳು ಕೊಚ್ಚಿಹೋಗಿವೆ. ಬಿರುಸಾದ ಗಾಳಿಗೆ ಮರಗಳು ಬೀಳುತ್ತಿವೆ. ನಗರದಲ್ಲಿ ಹಿಮಪಾತದ ಅಪಾಯ ಹೆಚ್ಚಾಗಿದೆ. ಈಗ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸ್ಥಳೀಯ ಆಡಳಿತ ರಕ್ಷಣಾ ಕಾರ್ಯ ಕೈಗೊಂಡಿದೆ. ಅಲ್ಲಲ್ಲಿ ಸಾವು-ನೋವು ವರದಿಯಾಗಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತದ ಪರಿಣಾಮ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನಗರವು ವಿಪರೀತ ಮಳೆ ಮತ್ತು ಹಿಮದಿಂದ ತತ್ತರಿಸುತ್ತಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಈ ವಾರದ ಮಧ್ಯ ಸಿಯೆರಾ ಮತ್ತು ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮ ಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಮಾಂಟೆರಿ ಕೌಂಟಿಯಲ್ಲಿ ಅನಾನಸ್ ಎಕ್ಸ್‌ಪ್ರೆಸ್ ಚಂಡಮಾರುತದ ಪ್ರಭಾವದ ಮಧ್ಯೆ ಪಜಾರೋ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ನದಿ ದಡದ ಸುಮಾರು 1,700 ನಿವಾಸಿಗಳು ಸೇರಿದಂತೆ 8,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅದರಲ್ಲಿ ಅನೇಕರು ಲ್ಯಾಟಿನೋ ಕೃಷಿ ಕೆಲಸಗಾರರಾಗಿದ್ದಾರೆ. ಪಜಾರೊ ಕಣಿವೆಯು ಸ್ಟ್ರಾಬೆರಿ, ಸೇಬು, ಹೂಕೋಸು, ಕೋಸುಗಡ್ಡೆ ಮತ್ತು ಆರ್ಟಿಚೋಕ್‌ಗಳನ್ನು ಬೆಳೆಯಲು ಹೆಸರುವಾಸಿಯಾದ ಕರಾವಳಿ ಕೃಷಿ ಪ್ರದೇಶ.
ಪಜಾರೋ ನದಿಗೆ 120 ಅಡಿ ಅಗಲವಾಗಿ ಅಣೆಕಟ್ಟು ಕಟ್ಟಲಾಗಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ಡ್ಯಾಂ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಈಗಾಗಲೇ ಹತ್ತಾರು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಟ್ರಾಬೆರಿ ಬೆಳೆಗೆ ಹೆಸರುವಾಸಿಯಾದ ಉತ್ತರ ಕ್ಯಾಲಿಫೋರ್ನಿಯಾದ ಕೃಷಿ ಸಮುದಾಯದಿಂದ ಶನಿವಾರ ಆರಂಭದಲ್ಲಿ 1,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಯಿತು. ಉತ್ತರ ಕ್ಯಾಲಿಫೋರ್ನಿಯಾ ಪ್ರಸ್ತುತ ಅಕಾಲಿಕ ಮಳೆ ಅನುಭವಿಸುತ್ತಿದ್ದು, ಬುಧವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಪ್ರವಾಹದಿಂದಾಗಿ ಬಹಳಷ್ಟು ಹಾನಿಯಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಪಜಾರೊಗೆ ಭೇಟಿ ನೀಡುವಂತೆ ಸ್ಥಳೀಯ ಆಡಳಿತವು ಅಧ್ಯಕ್ಷ ಜೋ ಬೈಡನ್ ಅವರನ್ನು ಕೋರಿದೆ. ವರದಿಗಳ ಪ್ರಕಾರ, ಕ್ಯಾಲಿಫೋರ್ನಿಯಾ ಡಿಪಾರ್ಟ್‌ಮೆಂಟ್ ಆಫ್ ಫಾರೆಸ್ಟ್ರಿ ಮತ್ತು ಫೈರ್ ಪ್ರೊಟೆಕ್ಷನ್‌ನ ಡೈವಿಂಗ್ ತಂಡಗಳು ಮತ್ತು ಸ್ವಿಫ್ಟ್-ವಾಟರ್ ತಂಡಗಳು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ.
ಮಾಂಟೆರಿ ಕೌಂಟಿ ಅಧಿಕಾರಿಗಳ ಪ್ರಕಾರ, ಸ್ಯಾನ್ ಆರ್ಡೊ ಮತ್ತು ಕ್ಯಾಟಲ್‌ಮ್ಯಾನ್ ರೋಡ್ ಪ್ರದೇಶದಲ್ಲಿ ಸಲಿನಾಸ್ ನದಿ ತುಂಬಿ ಹರಿಯುತ್ತಿದೆ. ಪ್ರವಾಹದಿಂದಾಗಿ ಪಜಾರೋ ಪ್ರದೇಶದಲ್ಲಿ ಸುಮಾರು 1,700 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಧ್ಯಾಹ್ನ ತಿಳಿಸಿದ್ದರು. ಪಜಾರೋ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಗವರ್ನರ್ ಗೇವಿನ್ ನ್ಯೂಸಮ್ ಕಚೇರಿ ಶನಿವಾರ ತಿಳಿಸಿದೆ.
ಕ್ಯಾಲಿಫೋರ್ನಿಯಾದಲ್ಲಿ ಸುಮಾರು 50 ಮಿಲಿಯನ್ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಹಲವು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರವಾಗಲಿದೆ ಎಂದು ಇಲಾಖೆ ತಿಳಿಸಿದೆ. ಹೀಗಾಗಿ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಮೆನ್ನೆಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಇಂಥ ಭೀಕರ ದೃಶ್ಯ ಎಂದಾದರೂ ನೋಡಿದ್ದೀರಾ!