ವಾಷಿಂಗ್ಟನ್ ಡಿ.ಸಿ: ಚೀನಾದ ವಿರುದ್ಧ ಹತ್ತು ಹಲವು ನಿರ್ಬಂಧಗಳನ್ನು ವಿಧಿಸಿರುವ ಅಮೆರಿಕ ಈಗ ಮತ್ತೊಂದು ಶಾಕ್ ನೀಡಿದೆ. ಕಾರ್ಮಿಕರನ್ನು ಶೋಷಿಸುತ್ತಿರುವ ಆರೋಪದ ಮೇಲೆ ಎರಡು ಚೀನೀ ಕಂಪನಿಗಳನ್ನು ತನ್ನ ದೇಶದಲ್ಲಿ ಬ್ಯಾನ್ ಮಾಡಿದೆ. ಅದರ ಉತ್ಪನ್ನಗಳು ಮತ್ತು ಕಾರ್ಯಾಚರಣೆ ದೇಶದಲ್ಲಿ ನಿಷಿದ್ಧಗೊಳಿಸಿದೆ.
ಈ ಬಗ್ಗೆ ಅಮೆರಿಕ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (ಡಿಎಚ್ಎಸ್) ಆದೇಶ ಪ್ರಕಟಿಸಿದೆ. ಬ್ಯಾಟರಿ ತಯಾರಕ ಕ್ಯಾಮೆಲ್ ಗ್ರೂಪ್ ಮತ್ತು ಮಸಾಲೆ ತಯಾರಕ ಚೆಂಗ್ವಾಂಗ್ ಬಯೋಟೆಕ್ ಗ್ರೂಪ್ನ ಯಾವುದೇ ಉತ್ಪನ್ನಗಳು ಆಗಸ್ಟ್ 3 ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ.
ನಿರ್ಬಂಧಿತ ಎರಡು ಕಂಪನಿಗಳು ಚೀನಾದಲ್ಲಿ ಕಾರ್ಮಿಕರನ್ನು ನಿರಂತರ ಶೋಷಿಸಿ ಅವರಿಂದ ಹೆಚ್ಚಿನ ಕೆಲಸ ತೆಗೆದುಕೊಳ್ಳುತ್ತಿರುವ ಆರೋಪವಿದೆ. ಇದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ ಆಧಾರದ ಮೇಲೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಅಮೆರಿಕ ಅದರ ಉತ್ಪನ್ನಗಳನ್ನು ದೇಶದಲ್ಲಿ ಬ್ಯಾನ್ ಮಾಡುವುದಾಗಿ ಹೇಳಿದೆ.
ಅಮೆರಿಕದ ಡಿಎಚ್ಎಸ್ ಪ್ರಕಾರ, ಪಶ್ಚಿಮ ಚೀನೀ ಪ್ರಾಂತ್ಯದ ಕ್ಸಿನ್‌ಜಿಯಾಂಗ್‌ನಲ್ಲಿ ನರಮೇಧ ಮತ್ತು ಮಾನವೀಯತೆಯ ವಿರುದ್ಧವಾಗಿ ಕಂಪನಿಗಳು ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳಿಗೆ ಹೊಣೆಗಾರಿಕೆಯನ್ನು ನೀಡಲಾಗುತ್ತಿದೆ. ಇದು ಸಂಪೂರ್ಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ವಿರೋಧಿಸುವುದು ನಿರ್ಬಂಧಗಳ ಗುರಿಯಾಗಿದೆ ಎಂದಿದೆ.
ಕಾರ್ಮಿಕರ ಶೋಷಿಸುತ್ತಿರುವ ಈ ಎರಡು ಚೀನೀ ಕಂಪನಿಗಳು ಮಾನವ ಹಕ್ಕುಗಳನ್ನು ಕಾಪಾಡುವ, ಬಲವಂತದ ಕಾರ್ಮಿಕ ಮನಸ್ಥಿತಿಯನ್ನು ಬದಲಿಸಿಕೊಳ್ಳಲು ಈ ನಿರ್ಬಂಧ ಕ್ರಮ ಹೇರಲಾಗಿದೆ ಎಂದು ಡಿಎಚ್‌ಎಸ್‌ನ ಕಾರ್ಯದರ್ಶಿ ಅಲೆಜಾಂಡ್ರೊ ಮೇಯೊರ್ಕಾಸ್ ಹೇಳಿದ್ದಾರೆ. ನಾವು ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೇವೆ‘. ಆದರೆ, ಕ್ಸಿನ್‌ಜಿಯಾಂಗ್‌ನಿಂದ ಬಲವಂತವಾಗಿ ಕಾರ್ಮಿಕರಿಂದ ಉತ್ಪಾದಿಸಿದ ಸರಕುಗಳನ್ನು ಅಮೆರಿಕದ ಮಾರುಕಟ್ಟೆಯಿಂದ ಹೊರಗಿಡಲು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಯುಎಫ್ಎಲ್ಪಿಎ ಪಟ್ಟಿಯ ಪ್ರಕಾರ ಈವರೆಗೂ ನಿಷೇಧಕ್ಕೊಳಗಾದ ಕಂಪನಿಗಳು 24ಕ್ಕೆ ಹೆಚ್ಚಿವೆ.
ಆರೋಪ ನಿರಾಕರಿಸಿದ ಚೀನಾ: ತನ್ನ ಮೇಲೆ ಒಂದಿಲ್ಲೊಂದು ಆರೋಪ ಮಾಡುತ್ತಿರುವ ಅಮೆರಿಕವನ್ನು ಚೀನಾ ಟೀಕಿಸಿದೆ. ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿಲ್ಲ. ಆ ದೇಶದ ಆರೋಪ ನಿರಾಧಾರ ಎಂದಿದೆ. ಕಂಪನಿಗಳನ್ನು ನಿಷೇಧಿಸುವ ಮೂಲಕ ಆ ದೇಶ ತಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಇದು ಮಾರುಕಟ್ಟೆ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಲ್ಲ ಎಂದಿದೆ.
ಇದನ್ನೂ ಓದಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆ ನಾವು ಬೆಂಬಲಿಸುತ್ತೇವೆ: ಅಮೆರಿಕ