ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ವಾಯುಪ್ರದೇಶದಲ್ಲಿ ಸಣ್ಣ ವಿಮಾನವೊಂದು ಭಾರಿ ಸಂಚಲನ ಸೃಷ್ಟಿಸಿದೆ. ಅನುಮಾನಾಸ್ಪದವಾಗಿ ಕಂಡಿದ್ದ ವಿಮಾನವನ್ನು ಎಫ್ -16 ಫೈಟರ್ ಜೆಟ್ ಬೆನ್ನಟ್ಟಿತ್ತು. ಆದರೆ, ಈ ಫೈಟರ್ ಜೆಟ್ ಅತಿ ವೇಗದಲ್ಲಿ ಜನವಸತಿ ಪ್ರದೇಶದ ಮೇಲೆ ಹಾರುತ್ತಿದ್ದಂತೆ ಭಾರಿ ಸದ್ದು ಕೇಳಿ ಬಂದಿದ್ದು, ಇದರಿಂದ ವಾಷಿಂಗ್ಟನ್ ಜನತೆ ಕೆಲ ಬೆಚ್ಚಿಬಿದ್ದ ಘಟನೆ ನಡೆದಿದೆ.
ಅಮೆರಿಕ ಸಮಯದ ಪ್ರಕಾರ ಭಾನುವಾರ ಮಧ್ಯಾಹ್ನ ಟೆನ್ನೆಸ್ಸಿಯ ಎಲಿಜಬೆತ್‌ಟೌನ್‌ನಿಂದ ವ್ಯಾಪಾರದ ಜೆಟ್ವೊಂದು ಹೊರಟಿತು. ಲಾಂಗ್ ಐಲ್ಯಾಂಡ್‌ನ (ನ್ಯೂಯಾರ್ಕ್) ಮ್ಯಾಕ್‌ಆರ್ಥರ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವ್ಯಾಪಾರ ಜೆಟ್ ಅನಿರೀಕ್ಷಿತವಾಗಿ ತನ್ನ ದಿಕ್ಕನ್ನು ಬದಲಾಯಿಸಿದೆ. ಲಾಂಗ್ ಐಲ್ಯಾಂಡ್ ವಾಯುಪ್ರದೇಶವನ್ನು ಸ್ವಲ್ಪ ಹೊತ್ತು ಸುತ್ತಿದ ನಂತರ ವಿಮಾನವು ವಾಷಿಂಗ್ಟನ್‌ನ ವಾಯುಪ್ರದೇಶವನ್ನು ಪ್ರವೇಶಿಸಿತು.
ಯುಎಸ್ ಕ್ಯಾಪಿಟಲ್ ವಾಷಿಂಗ್ಟನ್ನಲ್ಲಿರುವ ಶ್ವೇತಭವನದ ಮೇಲೆ ಹಾದು ಹೋಗಿದೆ. ಭದ್ರತೆಯ ವಿಷಯದಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ಅಮೆರಿಕ ಮಿಲಿಟರಿ ತಕ್ಷಣವೇ ಎಚ್ಚರಗೊಂಡಿತು. ಬಳಿಕ ವ್ಯಾಪಾರ ಜೆಟ್ ಪೈಲಟ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಎಫ್-16 ಫೈಟರ್ ಜೆಟ್ ಮೂಲಕ ವಿಮಾನವನ್ನು ಬೆನ್ನಟ್ಟಲಾಯಿತು.
ಭಾರೀ ಸದ್ದಿಗೆ ಬೆಚ್ಚಿಬಿದ್ದ ಜನ: ಸಾಮಾನ್ಯವಾಗಿ ಫೈಟರ್ ಜೆಟ್‌ಗಳು ಜನಸಂದಣಿಯಲ್ಲಿ ನಿಗದಿತ ವೇಗದಲ್ಲಿ ಮಾತ್ರ ಹಾರುತ್ತವೆ. ಆದರೆ ತುರ್ತು ಸಂದರ್ಭಗಳಲ್ಲಿ ಫೈಟರ್ ಜೆಟ್‌ಗಳು ಸೂಪರ್‌ಸಾನಿಕ್ ವೇಗದಲ್ಲಿ ಹಾರಲು ಸಹ ಅನುಮತಿಸಲಾಗಿದೆ. ವಾಣಿಜ್ಯೋದ್ಯೇಶದ ಜೆಟ್ ಅನುಮಾನಾಸ್ಪದವಾಗಿ ಕಂಡು ಬಂದಿದ್ದರಿಂದ F-16 ಹೆಚ್ಚಿನ ವೇಗದಲ್ಲಿ ಗಾಳಿಯಲ್ಲಿ ಹಾರಬೇಕಾಯಿತು. ಹೀಗಾಗಿ ಭಾರಿ ಸದ್ದು ಕೇಳಿಸಿತು. ವಾಷಿಂಗ್ಟನ್, ವರ್ಜೀನಿಯಾ ಮತ್ತು ಮೇರಿಲ್ಯಾಂಡ್ ಸೇರಿದಂತೆ ಜನರು ಈ ಶಬ್ದಗಳನ್ನು ಕೇಳಿ ಭಯಭೀತರಾಗಿದ್ದರು. ಇದಲ್ಲದೇ, ವಾಣಿಜ್ಯ ಬಳಕೆ ಜೆಟ್ ಪೈಲಟ್‌ನ ಗಮನವನ್ನು ಸೆಳೆಯಲು ಯುದ್ಧ ವಿಮಾನದಿಂದ ಜ್ವಾಲೆಗಳನ್ನು ಸಹ ಬಿಡುಗಡೆ ಮಾಡಲಾಯಿತು. ಇದನ್ನು ಕಂಡ ಜನರು ಗಾಬರಿಗೊಂಡು ಮನೆಗಳ ಒಳಗೆ ಹೋದರು.
ಜೆಟ್ ವಿಮಾನ ಪತನ: ಸ್ವಲ್ಪ ಸಮಯದವರೆಗೆ ವಾಷಿಂಗ್ಟನ್‌ನಲ್ಲಿ ಹಾರಾಟ ನಡೆಸಿದ ವಾಣಿಜ್ಯ ಬಳಕೆ ವಿಮಾನವು ವರ್ಜೀನಿಯಾದ ಕಾಡಿನಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅತಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ಪತನಗೊಂಡಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ಸೈಟ್‌ಗಳು ಬಹಿರಂಗಪಡಿಸಿವೆ. ಫ್ಲೋರಿಡಾದ ಎನ್ಕೋರ್ ಮೋಟಾರ್ಸ್ ಹೆಸರಿನಲ್ಲಿ ವಿಮಾನವನ್ನು ನೋಂದಾಯಿಸಲಾಗಿದೆ. ಈ ಕಂಪನಿಯ ಮಾಲೀಕ ಝಾರ್ ರಾಂಪೆಲ್ ಪ್ರತಿಕ್ರಿಯಿಸಿದ್ದು, ಆ ವಿಮಾನದಲ್ಲಿ ನನ್ನ ಮಗಳು ಮತ್ತು 2 ವರ್ಷದ ಮೊಮ್ಮಗಳು, ಆಯಾ ಮತ್ತು ಪೈಲಟ್ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ನನ್ನನ್ನು ನೋಡಲು ಬಂದು ವಾಪಸ್ ಮತ್ತೆ ವಿಮಾನದಲ್ಲಿ ಮನೆಗೆ ಹಿಂತಿರುಗುತ್ತಿದ್ದರು ಎಂದು ಅವರು ಹೇಳಿದರು. ಆದರೆ, ಘಟನಾ ಸ್ಥಳದಲ್ಲಿ ಯಾರೂ ಜೀವಂತವಾಗಿ ಪತ್ತೆಯಾಗಿಲ್ಲ ಎಂದು ವರ್ಜೀನಿಯಾ ಪೊಲೀಸರು ತಿಳಿಸಿದ್ದಾರೆ.
ಗಾಲ್ಫ್ ಆಡುತ್ತಿದ್ದ ಬೈಡನ್: ಫೈಟರ್ ಜೆಟ್ ಬಿಸಿನೆಸ್ ಜೆಟ್ ಅನ್ನು ಬೆನ್ನಟ್ಟಿದಾಗ ಅಧ್ಯಕ್ಷ ಬೈಡೆನ್ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಗಾಲ್ಫ್ ಆಡುತ್ತಿದ್ದರು. ಆದ್ರೂ ಸಹಿತ ಈ ಘಟನೆಯಿಂದಾಗಿ ಅವರ ವೇಳಾಪಟ್ಟಿಗೆ ಯಾವುದೇ ಪರಿಣಾಮ ಬೀರಲಿಲ್ಲ. ಘಟನೆಯ ಬಗ್ಗೆ ಬೈಡನ್‌ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ವಾಯುಪಡೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆ..? ಇಲ್ಲಿದೆ ಅದಕ್ಕೆ ಮಾರ್ಗ..