ಬೈರುತ್: ಮಧ್ಯ ಪ್ರಾಚ್ಯದ ಲೆಬನಾನ್ ದೇಶದ ಜನರು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಬೆಲೆ ಏರಿಕೆ ನಡುವೆ ಜೀವನ ನಡೆಸುವುದೇ ದುಸ್ತರವಾಗಿರುವ ಹಿನ್ನೆಲೆ ದೇಶದ ಶೇ 26ರಷ್ಟು ಮಕ್ಕಳನ್ನು ಶಾಲೆಯಿಂದ ಬಿಡಿಸಲಾಗಿದೆ ಎಂಬ ಮಾಹಿತಿಯನ್ನು ಯುನಿಸೆಫ್ ವರದಿ ತಿಳಿಸಿದೆ.
ಬುಧವಾರ ಯುನಿಸೆಫ್ ಬಿಡುಗಡೆ ಮಾಡಿದ ವರದಿಯಲ್ಲಿ ಏಪ್ರಿಲ್ನಲ್ಲಿ ಶೇ 18ರಷ್ಟು ಮಕ್ಕಳು ಶಾಲೆ ತೊರೆದಿದ್ದರೆ, ಇದೀಗ ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ಶೇ 26ರಷ್ಟಾಗಿದೆ ಎಂದು ತಿಳಿಸಿದೆ.
ದಕ್ಷಿಣ ಲೆಬನಾನ್ನಲ್ಲಿ ಹಗೆತನದ ತೀವ್ರತೆ ಕಾರಣದಿಂದ 2023ರ ಅಕ್ಟೋಬರ್ನಿಂದ ಹಲವು ಶಾಲೆಗಳನ್ನು ಮುಚ್ಚಲಾಗಿದೆ. ಇದು 6 ಸಾವಿರ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಮಾಹಿತಿ ನೀಡಿದೆ.
ವರದಿಯಲ್ಲಿ ದೇಶದಲ್ಲಿ ಗಗನಕ್ಕೇರುತ್ತಿರುವ ಬೆಲೆಯುಂದಾಗಿ ಕುಟುಂಬಗಳು ಒಂದು ಹೊತ್ತಿನ ಊಟ ಮತ್ತು ಸೂರಿಗೂ ಕಷ್ಟ ಪಡುವಂತೆ ಆಗಿದೆ. ಸಮೀಕ್ಷೆಯಲ್ಲಿ ಬಯಲಾದ ಅಂಶದ ಅನುಸಾರ, ಕುಟುಂಬಗಳು ಮನೆಯ ನಿರ್ವಹಣೆಗಾಗಿ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದು, ಕಳೆದ ಏಪ್ರಿಲ್ಗೆ ಹೋಲಿಕೆ ಮಾಡಿದಾಗ ಮಕ್ಕಳ ದುಡಿಮೆಯ ಸಂಖ್ಯೆ ಶೇ 4ರಷ್ಟು ಹೆಚ್ಚಾಗಿದೆ.
ಈ ನಡುವೆ 10ರಲ್ಲಿ 8 ಕುಟುಂಬಗಳು ಮನೆ ನಿರ್ವಹಣೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತರಲು ಸಾಲದ ಮೊರೆ ಹೋಗುತ್ತಿವೆ. ಈ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಶೇ 16ರಷ್ಟು ಹೆಚ್ಚಾಗಿದೆ. ಜೊತೆಗೆ ಆರೋಗ್ಯ ಚಿಕಿತ್ಸೆ ಮಾಡುತ್ತಿದ್ದ ವ್ಯಯವನ್ನು ಶೇ 81ರಷ್ಟು ತಗ್ಗಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಹಸಿವು ಮತ್ತು ಅನಿಶ್ಚಿತತೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಅಧಿಕ ಪರಿಣಾಮವನ್ನು ಹೊಂದಿದ್ದು, ಶೇ 38ರಷ್ಟು ಮಕ್ಕಳು ಆತಂಕ ಮತ್ತು ಶೇ 24ರಷ್ಟು ಮಕ್ಕಳು ಪ್ರತಿನಿತ್ಯ ಖಿನ್ನತೆಗೆ ಗುರಿಯಾಗುತ್ತಿದ್ದಾರೆ.
ಈ ಭೀಕರ ಬಿಕ್ಕಟು ಸಾವಿರಾರು ಮಕ್ಕಳ ಬಾಲ್ಯವನ್ನು ಕಸಿದಿದೆ. ಇವು ಮಕ್ಕಳ ಕನಸನ್ನು ಹೊಸಕಿ ಹಾಕಿದ್ದು, ಅವರನ್ನು ಕಲಿಕೆ, ಅವರ ಖುಷಿ ಮತ್ತು ಭವಿಷ್ಯದಿಂದ ದೂರ ಆಗಿಸಿದೆ ಎಂದು ಲೆಬನಾನ್ನಲ್ಲಿನ ಯುನಿಸೆಫ್ ಪ್ರತಿನಿಧಿ ಎಡ್ವರ್ಡ್ ಬೀಗ್‌ಬೆಡರ್ ತಿಳಿಸಿದ್ದಾರೆ.
ಮಕ್ಕಳ ಪ್ರತಿನಿತ್ಯ ನರಳುತ್ತಿರುವುದನ್ನು ನಿಲ್ಲಿಸಬೇಕಿದೆ. ಲೆಬನಾನ್ನಲ್ಲಿನ ಪ್ರತಿ ಮಗುವು ಶಾಲೆ ಮತ್ತು ಕಲಿಕೆ ಆರಂಭಿಸುವ ಪ್ರಯತ್ನವನ್ನು ನಾವು ದುಪ್ಪಟ್ಟು ಮಾಡಬೇಕಿದೆ. ಅವರನ್ನು ದೈಹಿಕ ಮತ್ತು ಮಾನಸಿಕ ಹಾನಿಯಿಂದ ಕಾಪಾಡಬೇಕಿದೆ ಎಂದರು. (ಐಎಎನ್ಎಸ್)
ಇದನ್ನೂ ಓದಿ: ಹಮಾಸ್ ಸುರಂಗಗಳಲ್ಲಿ ಸಮುದ್ರದ ನೀರು ನುಗ್ಗಿಸಲಾರಂಭಿಸಿದ ಇಸ್ರೇಲ್