ಬರ್ಲಿನ್ (ಜರ್ಮನಿ): ಜಗತ್ತಿನಾದ್ಯಂತ ಆಹಾರ ಕೊರತೆಯಿಂದ ಮಹಾ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯಾ ಗುಟೇರೆಸ್ ಎಚ್ಚರಿಸಿದ್ದಾರೆ. ಅಲ್ಲದೇ, ರಸಗೊಬ್ಬರ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದ ಪ್ರಪಂಚದಾದ್ಯಂತ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬರ್ಲಿನ್ನಲ್ಲಿ ನಡೆದ ಶ್ರೀಮಂತ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಧಿಕಾರಿಗಳ ಸಭೆಯಲ್ಲಿ ವಿಡಿಯೋ ಸಂದೇಶ ನೀಡಿದ ಅವರು, ಈಗಾಗಲೇ ಹವಾಮಾನ ವೈಪರೀತ್ಯ, ಕೊರೊನಾ ಹಾವಳಿ ಹಾಗೂ ಹೆಚ್ಚುತ್ತಿರುವ ಅಸಮತೋಲನ ಕಾರಣದಿಂದ ಕೋಟ್ಯಂತರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಹೊಸದಾಗಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದು ಆಹಾರದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.
ಇದೇ 2022ರಲ್ಲಿ ಬಹು ಕ್ಷಾಮ ಎಂದು ಘೋಷಿಸುವ ನಿಜವಾದ ಅಪಾಯವಿದೆ. ಈ ವರ್ಷ ಅಲ್ಲದ್ದಿದ್ದರೂ 2023ರಲ್ಲಿ ಭೀಕರ ಪರಿಸ್ಥಿತಿ ಎದುರಾಗಲಿದೆ. ಗೊಬ್ಬರ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದ ರೈತರು ತೊಂದರೆಗೆ ಸಿಲುಕಿರುವ ಮಧ್ಯೆಯೇ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದಾದ್ಯಂತ ಫಸಲಿನ ಮೇಲೆ ಪರಿಣಾಮ ಬೀರಲಿದೆ. ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ದುರಂತಗಳಿಂದ ಯಾವುದೇ ದೇಶವು ಹೊರಗುಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಬಡ ರಾಷ್ಟ್ರಗಳ ಆರ್ಥಿಕತೆ ಚೇತರಿಕೆಗಾಗಿ ಸಾಲದಿಂದ ನಿರಾಳತೆ ನೀಡಬೇಕು ಮತ್ತು ಜಾಗತಿಕ ಆಹಾರ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಖಾಸಗಿ ವಲಯಕ್ಕೆ ಸಹಾಯ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ತಲುಪಿದ ಭಾರತದ 65 ಕೋಟಿ ರೂ. ಮೌಲ್ಯದ ಮಾನವೀಯ ನೆರವು