ಮಾಸ್ಕೋ(ರಷ್ಯಾ): ರಷ್ಯಾದ ಬೆಲ್ಗೊರೊಡ್ ನಗರದ ಮೇಲೆ ಶನಿವಾರ ಉಕ್ರೇನ್ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಷ್ಯಾದ ತುರ್ತು ಪರಿಸ್ಥಿತಿ ಸಚಿವಾಲಯ ನೀಡಿದ ಮಾಹಿತಿ ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ನೈಋತ್ಯ ರಷ್ಯಾದ ನಾಗರಿಕ ಪ್ರದೇಶಗಳ ಮೇಲೆ ಉಕ್ರೇನ್ ಮಾರಣಾಂತಿಕ ವೈಮಾನಿಕ ದಾಳಿ ಆರಂಭಿಸಿದೆ ಎಂದು ಮಾಸ್ಕೋ ಆರೋಪಿಸಿದೆ. ರಷ್ಯಾದ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಗಡಿ ಸಮೀಪದ ಬೆಲ್ಗೊರೊಡ್ ನಗರದಲ್ಲಿ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆ ಪ್ರದೇಶದ ಗವರ್ನರ್ ಹೇಳಿದ್ದಾರೆ.
ಬೆಲ್ಗೊರೊಡ್ ಪ್ರದೇಶದಲ್ಲಿ 13 ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಶುಕ್ರವಾರ ಉಕ್ರೇನ್ ಮೇಲೆ ರಷ್ಯಾವು ದಾಳಿ ನಡೆಸಿದ ನಂತರ ಈ ದಾಳಿ ವರದಿಯಾಗಿದೆ. ಡೌನ್ಟೌನ್ ಬೆಲ್ಗೊರೊಡ್ನಲ್ಲಿ ನಡೆಸಿದ ವೈಮಾನಿಕ ದಾಳಿಯು ಸಾವು-ನೋವುಗಳಿಗೆ ಕಾರಣವಾಗಿದೆ. ದಾಳಿಯಲ್ಲಿ ಉಕ್ರೇನಿಯನ್ ಓಲ್ಖಾ ಮತ್ತು ಜೆಕ್ ನಿರ್ಮಿತ ವ್ಯಾಂಪೈರ್ ರಾಕೆಟ್‌ಗಳು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಬಳಸಿದೆ ಎಂದು ಮಾಸ್ಕೋ ದೂರಿದೆ. ಈ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತು ಸಭೆ ನಡೆಸಬೇಕು ಎಂದು ತನ್ನ ದೇಶವು ಕೇಳಿಕೊಂಡಿರುವುದಾಗಿ ರಷ್ಯಾದ ಮೊದಲ ಉಪ ಖಾಯಂ ಪ್ರತಿನಿಧಿ ಡಿಮಿಟ್ರಿ ಪಾಲಿಯಾನ್ಸ್ಕಿ ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ 122 ಕ್ಷಿಪಣಿ, 36 ಡ್ರೋನ್ ದಾಳಿ ನಡೆಸಿದ ರಷ್ಯಾ: 27 ಜನ ಸಾವು
ಇನ್ನು, ಗುರುವಾರ ಮತ್ತು ಶುಕ್ರವಾರ ರಾತ್ರಿಯಿಡೀ ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ 122 ಕ್ಷಿಪಣಿ ಮತ್ತು 36 ಡ್ರೋನ್‌ಗಳೊಂದಿಗೆ ದಾಳಿ ನಡೆಸಿದೆ. ಘಟನೆಯಿಂದ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. 22 ತಿಂಗಳ ಸುದೀರ್ಘ ಯುದ್ಧದಲ್ಲಿ ಇದು ಅತಿದೊಡ್ಡ ವೈಮಾನಿಕ ದಾಳಿ ಎಂದು ಉಕ್ರೇನ್ ಹೇಳಿದೆ. ಇದರ ಜೊತೆಗೆ, ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮಿತ್ರರಾಷ್ಟ್ರಗಳಿಗೆ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಮನವಿ ಮಾಡಿದ್ದಾರೆ.
ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಪ್ರತಿಯೊಂದು ಶಸ್ತ್ರಾಸ್ತ್ರವನ್ನೂ ನಮ್ಮ ವಿರುದ್ಧ ಪ್ರಯೋಗಿಸಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 96 ಕ್ಷಿಪಣಿ ಮತ್ತು ಈ ವರ್ಷದ ಮಾರ್ಚ್‌ನಲ್ಲಿ 81 ಕ್ಷಿಪಣಿಗಳ ಮೂಲಕ ದಾಳಿಗೈದಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.