ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಿಂದ ಸಾವಿರಾರು ಸೈನಿಕರು ಸೇರಿದಂತೆ ಅನೇಕ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಈ ಯುದ್ಧ ಉದ್ದೇಶ ಪೂರ್ವಕವಾಗಿದ್ದು, ರಷ್ಯಾ ಸೇನೆಯು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನ ದಾರಿತಪ್ಪಿಸುತ್ತಿದೆ ಎಂಬ ಮಾಹಿತಿ ಅಮೆರಿಕಕ್ಕೆ ಲಭ್ಯವಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಟ್ ಬೆಡಿಂಗ್ಫೀಲ್ಡ್, ರಷ್ಯಾದ ಮಿಲಿಟರಿ ಸಲಹೆಗಾರರು ಪುಟಿನ್ ಅವರಿಗೆ ಸುಳ್ಳು ಮಾಹಿತಿ ನೀಡಿ, ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಪುಟಿನ್ ಮತ್ತು ಅವರ ಮಿಲಿಟರಿ ನಾಯಕತ್ವದ ನಡುವೆ ನಿರಂತರವಾದ ಉದ್ವಿಗ್ನತೆಗೆ ಕಾರಣವಾಗಿದೆ. ಈ ಕುರಿತಾದ ಮಾಹಿತಿ ನಮಗೆ ಗುಪ್ತಚರ ಇಲಾಖೆಯಿಂದ ಲಭ್ಯವಾಗಿದೆ ಎಂದು ತಿಳಿಸಿದರು.
ರಷ್ಯಾದ ಮಿಲಿಟರಿ ಎಷ್ಟು ಕೆಟ್ಟದಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಷ್ಯಾದ ಆರ್ಥಿಕತೆಯು ನಿರ್ಬಂಧಗಳಿಂದ ಹೇಗೆ ದುರ್ಬಲಗೊಳ್ಳುತ್ತಿದೆ ಎಂಬುದರ ಕುರಿತು ಪುಟಿನ್ ಅವರ ಸಲಹೆಗಾರರಿಂದ ತಪ್ಪು ಮಾಹಿತಿ ನೀಡಲಾಗುತ್ತಿದೆ. ಅವರ ಹಿರಿಯ ಸಲಹೆಗಾರರು ಸತ್ಯವನ್ನು ಹೇಳಲು ತುಂಬಾ ಹೆದರುತ್ತಾರೆ ಎಂದು ಶ್ವೇತಭವನ ಆರೋಪಿಸಿದೆ.
ಇದನ್ನೂ ಓದಿ: ಚೆರ್ನೋಬಿಲ್ ಅಣು ಸ್ಥಾವರದಿಂದ ರಷ್ಯಾ ಪಡೆಗಳು ವಾಪಸ್- ಅಮೆರಿಕ