ಅಂಕಾರ(ಟರ್ಕಿ): ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ನೇತೃತ್ವದಲ್ಲಿ ರಷ್ಯಾ- ಉಕ್ರೇನ್ ನಡುವೆ ಸಂಧಾನ ಮಾತುಕತೆ ನಡೆಯಲಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಶಾಂತಿ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷರು ಹೇಳಿದ್ದಾರೆ.
ಉಭಯ ನಾಯಕರು ಭಾನುವಾರ ದೂರವಾಣಿ ಸಂಭಾಷಣೆ ನಡೆಸಿದ ವೇಳೆ ಸಂಧಾನ ಮಾತುಕತೆಗೆ ಒಪ್ಪಿಕೊಳ್ಳಲಾಗಿದೆ. ರಷ್ಯಾ - ಉಕ್ರೇನ್ ಸಂಘರ್ಷದ ಕುರಿತಂತೆ ಉಭಯ ನಾಯಕರು ಚರ್ಚಿಸಿದರು. ಈ ವೇಳೆ, ಈಗ ಉಭಯ ರಾಷ್ಟ್ರಗಳ ನಡುವೆ ನಡೆದಿರುವ ಶಾಂತಿ ಮಾತುಕತೆಗಳನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು, ಮುಂದಿನ ಸಭೆಯನ್ನು ಇಸ್ತಾಂಬುಲ್ನಲ್ಲಿ ನಡೆಸಲು ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ದೂರವಾಣಿ ಮಾತುಕತೆ ವೇಳೆ ಟರ್ಕಿ ಅಧ್ಯಕ್ಷ ಎರ್ಡೊಗನ್, ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ವಿರಾಮ ಘೋಷಣೆ ಮಾಡಬೇಕು. ಹಾಗೂ ಆದಷ್ಟು ಬೇಗ ಎರಡೂ ಕಡೆ ಶಾಂತಿ ನೆಲಗೊಳ್ಳುವಂತೆ ಮಾಡಬೇಕು ಎಂಬ ಬಗ್ಗೆ ಸಹಮತಕ್ಕೆ ಬರಲಾಗಿದೆ ಎನ್ನಲಾಗಿದೆ. ಶಾಂತಿ ಮಾತುಕತೆಗೆ ಟರ್ಕಿ ಎಲ್ಲ ನೆರವು ನೀಡಲು ಸಿದ್ಧ ಎಂದು ಟರ್ಕಿ ಅಧ್ಯಕ್ಷರು ಪುಟಿನ್ಗೆ ಭರವಸೆ ನೀಡಿದರು ಎಂದು ಟರ್ಕಿ ಅಧ್ಯಕ್ಷರ ಮೂಲಗಳು ತಿಳಿಸಿವೆ.
ಈ ಮಾತುಕತೆಗೂ ಮುನ್ನವೇ ಉಕ್ರೇನ್ ನಿಯೋಗದ ಸದಸ್ಯರೊಬ್ಬರು ಮುಂದಿನ ಶಾಂತಿ ಮಾತುಕತೆ ಟರ್ಕಿಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಅಷ್ಟೇ ಅಲ್ಲ ಭಾನುವಾರ ನಡೆದ ಮಾತುಕತೆ ವೇಳೆ, ಮಾರ್ಚ್ 28 - 30 ರಂದು ಟರ್ಕಿಯಲ್ಲಿ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಅರಾಖಮಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಏತನ್ಮಧ್ಯೆ, ಮಾರ್ಚ್ 29-30 ರಂದು ಮುಖಾಮುಖಿ ಮಾತುಕತೆ ನಡೆಯಲಿದೆ ಎಂದು ರಷ್ಯಾ ಸಂಧಾನ ತಂಡದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ:ಬೋಯಿಂಗ್ 737-800 ವಿಮಾನ ಪತನ : ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ