ಕೀವ್ (ಉಕ್ರೇನ್) : ರಷ್ಯಾ ಪಡೆಗಳು ವಿರುದ್ಧ ಉಕ್ರೇನ್ ಸೇನೆಯು ಪ್ರತ್ಯಾಕ್ರಮಣವನ್ನು ತೀವ್ರಗೊಳಿಸಿದ್ದು, ಆಗ್ನೇಯ ಗ್ರಾಮವೊಂದನ್ನು ಪುನಃ ವಶಪಡಿಸಿಕೊಳ್ಳಲಾಗಿದೆ ಎಂದು ಭಾನುವಾರ ಉಕ್ರೇನ್ ವರದಿ ಮಾಡಿದೆ. ಇನ್ನೊಂದೆಡೆ, ಮಾಸ್ಕೋ ಪಡೆಗಳು ಜನರನ್ನು ಸ್ಥಳಾಂತರಿಸುವ ದೋಣಿಯ ಮೇಲೆ ಗುಂಡು ಹಾರಿಸಿದ್ದು, ಆರು ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಉನ್ನತ ಸಲಹೆಗಾರ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಅಧ್ಯಕ್ಷರ ಉನ್ನತ ಸಲಹೆಗಾರ ಆಂಡ್ರಿ ಯೆರ್ಮಾಕ್ ಅವರು ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡವರನ್ನು ದಕ್ಷಿಣ ನಗರವಾದ ಖೆರ್ಸನ್‌ನಲ್ಲಿರುವ ಡ್ನೀಪರ್ ನದಿಯ ಪಶ್ಚಿಮ ದಂಡೆಯಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ತಂಡವು ಆಂಬ್ಯುಲೆನ್ಸ್‌ಗಳ ಮೂಲಕ ಗಾಯಳುಗಳನ್ನು ಸ್ಥಳಾಂತರಿಸಿತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ರಷ್ಯಾ ಬಾಂಬ್ ದಾಳಿಯಿಂದ ಉಕ್ರೇನ್‌ನ ಬೃಹತ್ ಅಣೆಕಟ್ಟೆಗೆ ಹಾನಿ, ಭಾರಿ ಪ್ರವಾಹ ಸಾಧ್ಯತೆ- ವಿಡಿಯೋ
68ನೇ ತುಕಡಿಯ ಯೋಧರು ಡೊನೆಟ್ಸ್ಕ್ ಪ್ರದೇಶದ ಬ್ಲಾಹೋಡಾಟ್ನೆ ಗ್ರಾಮವನ್ನು ಶತ್ರುಗಳ ಕೈಯಿಂದ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉಕ್ರೇನ್ ಸೇನೆ ವಿಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಹಳ್ಳಿಯಲ್ಲಿನ ಹಾನಿಗೊಳಗಾದ ಕಟ್ಟಡದ ಮೇಲೆ ಸೈನಿಕರು ಉಕ್ರೇನಿಯನ್ ಧ್ವಜವನ್ನು ಮರು ಸ್ಥಾಪಿಸುತ್ತಿರುವುದನ್ನು ತೋರಿಸುತ್ತದೆ.
"ಶತ್ರುಗಳು ನಮ್ಮ ಸೈನಿಕರ ಮೇಲೆ ಶೆಲ್ ದಾಳಿ ಮಾಡುತ್ತಿದ್ದಾರೆ. ಉಕ್ರೇನಿಯನ್ ಸೇನೆ ಕೂಡ ಪ್ರತಿದಾಳಿ ಮಾಡುತ್ತಿದೆ. ಬ್ಲಾಹೋಡಾಟ್ನೆನ್ನು ವಶಪಡಿಸಿಕೊಳ್ಳುವಿಕೆಯು ಉಕ್ರೇನಿಯನ್ ಸೇನೆಗೆ ಸಣ್ಣ ಮುನ್ನಡೆ ಸೂಚಿಸುತ್ತದೆ. ನಾವು ಮರುಪಡೆಯಲು ಯೋಜಿಸಿರುವ ಮುಂದಿನ ಗ್ರಾಮ ಅಂದ್ರೆ ಉರೋಜೈನ್. ತದನಂತರ ದಕ್ಷಿಣ ಭಾಗದ ಮತ್ತಷ್ಟು ಗಾಮಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ" ಎಂದು ಬ್ರಿಗೇಡ್‌ನ ವಕ್ತಾರ ಮೈರೊಸ್ಲಾವ್ ಸೆಮೆನಿಯುಕ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Ukraine Russia war: ರಷ್ಯಾ ವಿರುದ್ಧ ಪ್ರತಿದಾಳಿ ಆರಂಭಿಸಿದ ಉಕ್ರೇನ್
ಉಕ್ರೇನ್‌ನ ಪ್ರತಿದಾಳಿ ಪ್ರಾರಂಭವಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ತಿಳಿಸಿದ್ದಾರೆ. ಹೀಗೆ ದಾಳಿ ಮುಂದುವರಿದರೆ ಉಕ್ರೇನಿಯನ್ ಪಡೆಗಳು ಗಮನಾರ್ಹ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಹಿತಿ ಪ್ರಕಾರ, ರಷ್ಯಾ ಉಕ್ರೇನ್ ಯುದ್ಧದಲ್ಲಿ ಫೆಬ್ರವರಿವರೆಗೆ 8,006 ಮಂದಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಸುಮಾರು 13,287 ಜನ ಗಾಯಗೊಂಡಿದ್ದಾರೆ. ಉಕ್ರೇನ್‌ನಲ್ಲಿ ಸುಮಾರು 16 ತಿಂಗಳಿಗೂ ಹೆಚ್ಚು ಕಾಲದಿಂದ ಯುದ್ಧ ಮುಂದುವರೆದಿದೆ.
ಕಳೆದ 24 ಫೆಬ್ರವರಿ 2022 ರಂದು ಉತ್ತರ, ಪೂರ್ವ ಮತ್ತು ದಕ್ಷಿಣದಿಂದ ರಷ್ಯಾ ಸೇನೆಯು ಉಕ್ರೇನ್ ಮೇಲೆ ದಾಳಿ ಆರಂಭಿಸಿತ್ತು. ಮುಂದಿನ ಎರಡು ದಿನಗಳಲ್ಲಿ ಎರಡು ದೊಡ್ಡ ನಗರಗಳಾದ ಕೈವ್ ಮತ್ತು ಖಾರ್ಕಿವ್ ಮೇಲೆ ತೀವ್ರ ಶೆಲ್ ದಾಳಿ ಮತ್ತು ಕ್ಷಿಪಣಿ ದಾಳಿ ನಡೆಸುವ ಮೂಲಕ ರಷ್ಯಾ ಯುದ್ಧವನ್ನು ಆರಂಭಿಸಿತ್ತು.
ಇದನ್ನೂ ಓದಿ : ಉಕ್ರೇನ್ ಅಣೆಕಟ್ಟು ಸ್ಫೋಟ : ಸುರಕ್ಷಿತ ಸ್ಥಳಗಳಿಗೆ ತೆರಳಲು ನಾಗರಿಕರ ಹರಸಾಹಸ