ಬ್ರಿಟನ್: ದೀಪಾವಳಿಗೂ ಮುನ್ನವೇ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಅಧಿಕೃತ ಕಾರ್ಯಾಲಯ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ಪ್ರಪಂಚದಾದ್ಯಂತ ಇರುವ ಹಿಂದೂ ಸಮುದಾಯಕ್ಕೆ ಬೆಳಕಿನ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದಕ್ಕೂ ಮುನ್ನ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಒಟ್ಟಿಗೆ ದೀಪ ಬೆಳಗಿಸುವ ಸಂಭ್ರಮಕ್ಕೆ ಚಾಲನೆ ಕೊಟ್ಟರು.
''ಪ್ರಧಾನ ಮಂತ್ರಿ ರಿಷಿ ಸುನಕ್ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರು. ಕತ್ತಲೆಯ ಮೇಲೆ ಬೆಳಕಿನ ವಿಜಯದ ಆಚರಣೆ ಇದು. ಯುಕೆ ಮತ್ತು ಪ್ರಪಂಚದಾದ್ಯಂತದ ಎಲ್ಲರಿಗೂ ದೀಪಾವಳಿಯ ಶುಭಾಶಯಗಳು'' ಎಂದು ಸುನಕ್ ಅವರ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ ಸುನಕ್ ಮತ್ತು ಮೂರ್ತಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುತ್ತಿರುವುದನ್ನು ನೋಡಬಹುದು.
ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ ಹೊಂದಿದೆ. ಹಿಂದೂ ಸಮುದಾಯದವರು ಹೆಚ್ಚು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬ ಕತ್ತಲೆ ಕಳೆದು ಬೆಳಕು ತರುತ್ತದೆ ಎನ್ನುವ ನಂಬಿಕೆಯಿದೆ. ಕೆಟ್ಟದನ್ನು ಹೋಗಲಾಡಿಸುತ್ತದೆ. ಅಜ್ಞಾನದ ಮೇಲೆ ಜ್ಞಾನದ ವಿಜಯ ಸಾಧಿಸುತ್ತದೆ ಎಂದು ಹೇಳಲಾಗುತ್ತದೆ.
ಪ್ರಧಾನಿ ಸುನಕ್ ಪಂಜಾಬಿ ಶೈಲಿಯ ಹಿಂದೂ ಸಂಪ್ರದಾಯಗಳನ್ನು ಆಚರಣೆ ಮಾಡುತ್ತಾರೆ. ಜಿ-20 ಶೃಂಗಸಭೆಗಾಗಿ ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ, ಸುನಕ್ ದಂಪತಿ ನವದೆಹಲಿಯ ಪ್ರಸಿದ್ಧ ಅಕ್ಷರಧಾಮ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಿಷಿ ಸುನಕ್ ದೂರವಾಣಿ ಸಂಭಾಷಣೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿ ಬಗ್ಗೆ ಚರ್ಚಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರಬಲ ಪ್ರದರ್ಶನಕ್ಕಾಗಿ ಸುನಕ್ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದರು.
"ಯುಕೆ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧ ಗಾಢವಾಗಿದೆ. ಉಭಯ ದೇಶಗಳ ನಾಯಕರು ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆ ನಡೆಸಿ ಇತ್ತೀಚಿನ ಪ್ರಗತಿ ಬಗ್ಗೆ ಚರ್ಚಿಸಿದ್ದರು. ಈ ಇಬ್ಬರು ನಾಯಕರು ಲಾಭದಾಯಕ ಮಹತ್ವಾಕಾಂಕ್ಷೆಯ ಒಪ್ಪಂದದ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದ್ದರು" ಎಂದು ಯುಕೆ ಸರ್ಕಾರ ಈ ಹಿಂದೆ ತಿಳಿಸಿತ್ತು.
ಇದನ್ನೂ ಓದಿ: ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಕದನ ವಿರಾಮ ಇಲ್ಲ: ಇಸ್ರೇಲ್ ಪ್ರಧಾನಿ ನೆತನ್ಯಾಹು