ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿ ಇಂಗ್ಲೆಂಡ್ನಲ್ಲಿ ಜೈಲುಪಾಲಾಗಿರುವ ವಜ್ರದ ವ್ಯಾಪಾರಿ, ವಂಚಕ ನೀರವ್ ಮೋದಿ ಭಾರತಕ್ಕೆ ತನ್ನನ್ನು ಹಸ್ತಾಂತರಿಸುವುದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಲಂಡನ್ ಹೈಕೋರ್ಟ್ ವಜಾ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಬ್ಯಾಂಕ್ ವಂಚನೆ ಕೇಸ್ನಲ್ಲಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದರ ವಿರುದ್ಧ ನೀರವ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ತಾವು ಮಾನಸಿಕವಾಗಿ ದೃಢವಾಗಿಲ್ಲ. ಭಾರತಕ್ಕೆ ಹಸ್ತಾಂತರಿಸಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನೀರವ್ ಮೋದಿ ಭಾರತದಲ್ಲಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದು, ವಿಚಾರಣೆಗಾಗಿ ಹಸ್ತಾಂತರಿಸುವುದು ದಬ್ಬಾಳಿಕೆ ಮತ್ತು ಅನ್ಯಾಯವಲ್ಲ. ಮಾನಸಿಕ ಅನಾರೋಗ್ಯದ ಕಾರಣಕ್ಕಾಗಿ ಹಸ್ತಾಂತರ ತಡೆಯಲು ಸಾಧ್ಯವಿಲ್ಲ ಎಂದು ಹೇಳಿ, ಭಾರತಕ್ಕೆ ಆರೋಪಿಯನ್ನು ಹಸ್ತಾಂತರಿಸಲು ಸೂಚಿಸಿತು.
2019 ರಿಂದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಲಂಡನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನೀರವ್ ಮೋದಿ ಭಾರತಕ್ಕೆ ಬೇಕಾಗಿರುವ ಪ್ರಮುಖ ಅಪರಾಧಿಯಾಗಿದ್ದಾನೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು, ಮರುಪಾವತಿಸಿದೇ ವಂಚಿಸಿ ಬ್ರಿಟನ್ಗೆ ಪರಾಗಿಯಾಗಿದ್ದಾನೆ.
ನೀರವ್ ಮೋದಿ ವಿರುದ್ಧ ಭಾರತದ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದು, ಆತನಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಓದಿ: ಮೇರಿಲ್ಯಾಂಡ್ ನ ಲೆಫ್ಟಿನೆಂಟ್ ಗವರ್ನರ್ ಆಗಿ ಭಾರತೀಯ ಅಮೆರಿಕನ್ ಅರುಣಾ ಮಿಲ್ಲರ್ ಆಯ್ಕೆ