ಕಂಪಾಲ (ಉಗಾಂಡ): ಉಗಾಂಡದ ರಾಜಧಾನಿ ಕಂಪಾಲ ಹೊರಗಿನ ಗ್ರಾಮೀಣ ಸಮುದಾಯದ ಅಂಧ ಮಕ್ಕಳ ಸಲಾಮಾ ಬೋರ್ಡಿಂಗ್ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮುಕೊನೊ ಜಿಲ್ಲೆಯ ಶಾಲೆಯಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. 7 ರಿಂದ 10 ವರ್ಷದೊಳಗಿನ ಅಂಧ ಹುಡುಗಿಯರೂ ಸೇರಿದಂತೆ ಬೆಂಕಿಗೆ ಬಲಿಯಾದವರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ. ಸಂತ್ರಸ್ತರ ದೇಹಗಳನ್ನು ಡಿಎನ್‌ಎ ವಿಶ್ಲೇಷಣೆ ಮೂಲಕ ಗುರುತಿಸಲಾಗುವುದು ಎಂದು ಪೊಲೀಸ್ ವಕ್ತಾರ ಲ್ಯೂಕ್ ಓವೊಯೆಸಿಗಿರ್ ಮಾಹಿತಿ ನೀಡಿದರು.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಶುಕ್ರವಾರ ಬ್ರಿಟನ್ನ ರಾಜಕುಮಾರಿ ಅನ್ನಿ ಪೂರ್ವ ಆಫ್ರಿಕಾ ದೇಶದ ಈ ಶಾಲೆಗೆ ಭೇಟಿ ನೀಡುವವರಿದ್ದರು. ಶಾಲೆಯಲ್ಲಿ ಬೆಂಕಿ ಅಪಘಾತವಾಗಿರುವ ಕುರಿತು ಉಗಾಂಡಾದ ಶಿಕ್ಷಣ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ತರಗತಿ ಕೊಠಡಿಗಳು ಹಾಗೂ ವಸತಿನಿಲಯಗಳಲ್ಲಿ ಸಾಮಾನ್ಯವಾಗಿ ಜನರ ಒಡಾಟ ಹೆಚ್ಚಾಗಿರುತ್ತದೆ. ಅದಲ್ಲದೆ ಆ ಸ್ಥಳಗಳಲ್ಲಿ ಯಾವುದೇ ಅಗ್ನಿಶಾಮಕ ಉಪಕರಣಗಳು ಇಲ್ಲದಿದ್ದದ್ದು ಕಳವಳಕ್ಕೆ ಕಾರಣವಾಗಿದೆ.
ಕೆಲವು ಸಂದರ್ಭಗಳಲ್ಲಿ ಕಳಪೆ ವಿದ್ಯುತ್ ಸಂಪರ್ಕದಿಂದಾಗಿ ಕಿಡಿ, ಜ್ವಾಲೆ ಬಂದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಬಯೋಕೆಮಿಕಲ್ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ