ಬೆಂಗಳೂರು: ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಗಾಜಾದ 360 ಚದರ ಕಿ.ಮೀ ಕರಾವಳಿ ಪ್ರದೇಶವನ್ನು ಆಕ್ರಮಿಸುವ ಉದ್ದೇಶದಿಂದ ಇಸ್ರೇಲಿ ಟ್ಯಾಂಕ್ಗಳು ಮತ್ತು ಮಿಲಿಟರಿ ಪಡೆಗಳು ಗಾಜಾ ಗಡಿಯಲ್ಲಿ ಜಮಾಯಿಸಿವೆ. ಆದರೆ ಗಾಜಾ ಪಟ್ಟಣದ ಕೆಳಗೆ ಹಮಾಸ್ ನಿರ್ಮಿಸಿಕೊಂಡಿರುವ ಸುರಂಗಗಳ ಜಾಲವನ್ನು ಭೇದಿಸುವುದು ಈಗ ಇಸ್ರೇಲ್ ಮುಂದಿರುವ ಬಹಳ ದೊಡ್ಡ ಸವಾಲಾಗಿದೆ.
ನೆಲದಿಂದ ಕನಿಷ್ಠ 8 ಮೀಟರ್ ಆಳದಲ್ಲಿ ನಿರ್ಮಾಣವಾಗಿರುವ ನೂರಾರು ಕಿಲೋಮೀಟರ್ ಉದ್ದದ ಸುರಂಗಗಳ ಜಾಲವು ಇಸ್ರೇಲಿ ಪಡೆಗಳಿಗೆ ಪ್ರಬಲ ಸವಾಲಾಗಿದೆ. ಹಮಾಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಒತ್ತೆಯಾಳುಗಳಲ್ಲಿ ಒಬ್ಬರು ಸುರಂಗ ಜಾಲವನ್ನು ಜೇಡರ ಜಾಲ (spider web) ಎಂದು ಉಲ್ಲೇಖಿಸಿರುವುದು ಗಮನಾರ್ಹ.
ಹಮಾಸ್ನ ವ್ಯಾಪಕ ಸುರಂಗ ಜಾಲವನ್ನು 'ಹಮಾಸ್ ಮೆಟ್ರೋ' ಎಂದು ಸಾಮಾನ್ಯವಾಗಿ ಕರೆಯಲಾಗುತ್ತಿದ್ದು, ಸುರಂಗಗಳನ್ನು ಕಳ್ಳಸಾಗಣೆ, ಸರಕು ಸಂಗ್ರಹಣೆ ಮತ್ತು ದಾಳಿಗಳನ್ನು ನಡೆಸಲು ನೆಲೆಯಾಗಿ ಬಳಸಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳಿವೆ.
ಹಮಾಸ್ನ ಸುರಂಗಗಳು ವಿಶಾಲವಾದ ಸಂಕೀರ್ಣ ಭೂಗತ ಜಾಲವಾಗಿವೆ. ಭೂಗತವಾಗಿ ನೂರಾರು ಕಿಲೋಮೀಟರ್ಗಳವರೆಗೆ ಹರಡಿಕೊಂಡಿರುವ ಸುರಂಗಗಳನ್ನು ಜನರು ಮತ್ತು ಸರಕುಗಳನ್ನು ಸಾಗಿಸಲು, ರಾಕೆಟ್ ಗಳು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಅಲ್ಲದೆ ಹಮಾಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಈ ಸುರಂಗಗಳಲ್ಲಿವೆ. ಇವೆಲ್ಲವೂ ಐಡಿಎಫ್ನ ವಿಮಾನಗಳು ಮತ್ತು ಕಣ್ಗಾವಲು ಡ್ರೋನ್ಗಳ ದೃಷ್ಟಿಗೆ ಬೀಳದ ಭೂಗತ ಲೋಕವಾಗಿವೆ.
ಗಾಜಾ ಅಡಿಯಲ್ಲಿ ಸುಮಾರು 500 ಕಿಲೋಮೀಟರ್ (311 ಮೈಲಿ) ಗಳಷ್ಟು ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಿರುವುದಾಗಿ 2021ರಲ್ಲಿ ಹಮಾಸ್ ಹೇಳಿಕೊಂಡಿತ್ತು. ಆದರೆ ಈ ಹೇಳಿಕೆ ಎಷ್ಟು ವಾಸ್ತವ ಎಂಬುದು ಗೊತ್ತಾಗಿಲ್ಲ. ಒಂದೊಮ್ಮೆ ಹಮಾಸ್ನ ಹೇಳಿಕೆ ನಿಜವೇ ಆಗಿದ್ದರೆ ಈ ಭೂಗತ ಸುರಂಗಗಳು ನ್ಯೂಯಾರ್ಕ್ ನಗರದ ಮೆಟ್ರೊ ಸುರಂಗಮಾರ್ಗ ವ್ಯವಸ್ಥೆಯ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಉದ್ದಕ್ಕೆ ಚಾಚಿಕೊಂಡಿವೆ.
ಬಡ ಪ್ರದೇಶವಾಗಿರುವ ಗಾಜಾವನ್ನು ನಿಯಂತ್ರಿಸುತ್ತಿರುವ ಹಮಾಸ್ ಈ ಸುರಂಗ ಜಾಲ ನಿರ್ಮಾಣಕ್ಕೆ ಎಷ್ಟು ಹಣ ಖರ್ಚು ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ. ಗಾಜಾ 2007ರಿಂದಲೂ ಇಸ್ರೇಲ್ನಿಂದ ಭೂ, ಸಮುದ್ರ ಮತ್ತು ವಾಯು ದಿಗ್ಬಂಧನ ಮತ್ತು ಈಜಿಪ್ಟ್ನಿಂದ ಭೂ ದಿಗ್ಬಂಧನಕ್ಕೆ ಒಳಗಾಗಿದೆ. ಹೀಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಸುರಂಗ ನಿರ್ಮಾಣ ಮಾಡಲು ಹಮಾಸ್ ಬಳಿ ದೊಡ್ಡ ಮಟ್ಟದ ಯಂತ್ರಗಳು, ತಂತ್ರಜ್ಞಾನ, ಮಾನವ ಶಕ್ತಿ, ಹಣ ಎಲ್ಲಿಂದ ಬಂತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಅಫ್ಘಾನಿಸ್ತಾನದ ಪರ್ವತಗಳಲ್ಲಿನ ಅಲ್ ಖೈದಾ ಅಥವಾ ಆಗ್ನೇಯ ಏಷ್ಯಾದ ಕಾಡುಗಳಲ್ಲಿನ ವಿಯೆಟ್ ಕಾಂಗ್ ಸುರಂಗಗಳಿಗಿಂತ ಹಮಾಸ್ ಸುರಂಗಗಳು ಭಿನ್ನವಾಗಿವೆ. 88 ಚದರ ಮೈಲಿಗಳಲ್ಲಿ 2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಜನನಿಬಿಡ ನಗರದ ಕೆಳಗೆ ಸುರಂಗ ಜಾಲ ಇದಾಗಿರುವುದು ಗಮನಾರ್ಹ ಸಂಗತಿ.
ಕಳೆದ ಕೆಲ ವರ್ಷಗಳಿಂದ ಹಮಾಸ್ ಸುರಂಗಗಳನ್ನು ನಾಶ ಮಾಡಲು ಇಸ್ರೇಲ್ ಪ್ರಯತ್ನಿಸುತ್ತಿದೆ. ಹೀಗಾಗಿ ಈಗ ಅದು ಆರಂಭಿಸಿರುವ ಯುದ್ಧದ ಮುಂದಿನ ಹಂತದ ಮುಖ್ಯ ಟಾರ್ಗೆಟ್ ಸುರಂಗಗಳೇ ಆಗಿರಲಿವೆ. ಆದರೆ ಇದಕ್ಕಾಗಿ ಮೊದಲು ಗಾಜಾದಲ್ಲಿನ ಸಾಮಾನ್ಯ ನಾಗರಿಕರನ್ನು ಸ್ಥಳಾಂತರಿಸಬೇಕಾಗುತ್ತದೆ. ಏನೇ ಆದರೂ ಈ ಕಾರ್ಯಾಚರಣೆ ಇಸ್ರೇಲ್ ಪಾಲಿಗೆ ತೀರಾ ಅಪಾಯಯಕಾರಿಯಾಗಿರಲಿದೆ ಎನ್ನುತ್ತಾರೆ ವಿಶ್ಲೇಷಕರು.
ಈ ವಾರ ಇಸ್ರೇಲಿ ಮಿಲಿಟರಿ ತನ್ನ ನೆಲದ ಮೇಲಿನ ಕಾರ್ಯಾಚರಣೆಯನ್ನು ವಿಸ್ತರಿಸಿ ಗಾಜಾದ ಹಲವಾರು ತಾಣಗಳ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ 150ಕ್ಕೂ ಹೆಚ್ಚು ಸುರಂಗಗಳನ್ನು ನಾಶ ಮಾಡಲಾಗಿದೆ ಎಂದು ಅದು ಹೇಳಿದೆ. ಸುಧಾರಿತ ಸೆನ್ಸರ್ಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್ ವ್ಯವಸ್ಥೆಯೊಂದಿಗೆ ಗಡಿಯನ್ನು ಭದ್ರಪಡಿಸಲು ಇಸ್ರೇಲ್ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡಿದೆ. ಆದರೂ ಹಮಾಸ್ ಅಕ್ಟೋಬರ್ 7 ರಂದು ಭೂಮಿ, ವಾಯು ಮತ್ತು ಸಮುದ್ರದ ಮೂಲಕ ದಾಳಿ ಮಾಡಲು ಸಾಧ್ಯವಾಯಿತು.
ಆಕಾಶ ಮಾರ್ಗದ ಮೂಲಕ ತೂರಿ ಬರುವ ರಾಕೆಟ್ ದಾಳಿಯನ್ನು ತಡೆಯಲು ಇಸ್ರೇಲ್ ಸಶಕ್ತ ಐರನ್ ಡೋಮ್ ಕವಚವನ್ನು ಹೊಂದಿದೆಯಾದರೂ, ಸುರಂಗ ಮಾರ್ಗಗಳನ್ನು ಭೇದಿಸುವ ಅಂಥ ಯಾವುದೇ ಐರನ್ ಡೋಮ್ ನಿರ್ಮಾಣ ಮಾಡಲು ಅದಕ್ಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಯುದ್ಧದಲ್ಲಿ ಸಹಾಯ ಮಾಡಿದ ಅಫ್ಘಾನಿಗಳನ್ನು ಕರೆಸಿಕೊಳ್ಳಲಿದೆ ಯುನೈಟೆಡ್ ಕಿಂಗ್ಡಮ್