ಲಂಡನ್: ಅನಿರೀಕ್ಷಿತವಾಗಿರದಿದ್ದರೂ ನಾಟಕೀಯ ಬೆಳವಣಿಗೆಯಲ್ಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಪ್ರಕಟಿಸಿದ್ದಾರೆ. ಕೇವಲ 45 ದಿನಗಳಲ್ಲೇ ಪಿಎಂ ಹುದ್ದೆ ತೊರೆದಿರುವ ಇವರು, ಬ್ರಿಟನ್ನ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯ ಪ್ರಧಾನಿಯಾಗಿ ನಿರ್ಗಮಿಸಿದ್ದಾರೆ.
ಗುರುವಾರ ಲಿಜ್ ಟ್ರಸ್ ತಮ್ಮ ಕಚೇರಿ ಮತ್ತು ಪ್ರಧಾನಿ ನಿವಾಸವಾದ 10 ಡೌನಿಂಗ್ ಸ್ಟ್ರೀಟ್‌ನ ಬಾಗಿಲ ಮುಂದೆ ನಿಂತು 'ನಾನು ಕನ್ಸರ್ವೇಟಿವ್ ಪಕ್ಷದಿಂದ ಆಯ್ಕೆಯಾದ ಜನಾದೇಶವನ್ನು ನೀಡಲು ಸಾಧ್ಯವಿಲ್ಲ' ಎಂದು ಘೋಷಿಸುವ ಮೂಲಕ ಅಧಿಕಾರದಿಂದ ಕೆಳಗಿಳಿದರು. ಇದರ ಪರಿಣಾಮವಾಗಿ ಬ್ರಿಟನ್ ಕೇವಲ ಮೂರುವರೆ ತಿಂಗಳಲ್ಲೇ ಊಹಿಸಲಾಗದ ಹಾಗೂ ಹಿಂದೆಂದೂ ನಡೆಯದ ರೀತಿಯಲ್ಲಿ ಮೂರನೇ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗಿದೆ. ಟ್ರಸ್ಗಿಂತ ಮುನ್ನ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.
ಇದನ್ನೂ ಓದಿ: ಬ್ರಿಟನ್ನಲ್ಲಿ ಬಿರುಗಾಳಿ.. ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ರಾಜೀನಾಮೆ
ಒಂದು ವಾರದೊಳಗೆ ಹೊಸ ಪಿಎಂ ಆಯ್ಕೆ: ಕನ್ಸರ್ವೇಟಿವ್ ಪಕ್ಷದಲ್ಲಿ ಆಂತರಿಕ ಚುನಾವಣೆಗಳನ್ನು ನಡೆಸುವ 1922ರ ಸಮಿತಿಯ ನಿಯಮಗಳ ಅನುಗುಣವಾಗಿ ಮುಂದಿನ ನಾಯಕತ್ವವನ್ನು ಒಂದು ವಾರದೊಳಗೆ ಪೂರ್ಣಗೊಳಿಸಲು ಲಿಜ್ ಟ್ರಸ್ ಸಮ್ಮತಿಸಿದ್ದಾರೆ. ಹೀಗಾಗಿಯೇ ಮುಂದಿನ ಒಂದೇ ವಾರದಲ್ಲಿ ಹೊಸ ಪ್ರಧಾನಿಯ ಆಯ್ಕೆಯಾಗುವ ನಿರೀಕ್ಷೆ ಇದೆ. ಜೊತೆಗೆ ಹಿಂದೆ ನಡೆದಂತಹ ಆಯ್ಕೆ ಪ್ರಕ್ರಿಯೆಯ ಬದಲಿಗೆ ಕನ್ಸರ್ವೇಟಿವ್ ಸಂಸದರು ಸೇರಿಕೊಂಡೇ ಮುಂದಿನ ಪಿಎಂರನ್ನು ಹೆಸರಿಸಬಹುದು ಎಂದು ವರದಿಯಾಗಿದೆ.
ರಿಷಿ ಸುನಕ್ ಸೇರಿ ಹಲವರ ಹೆಸರು ಮುಂಚೂಣಿಗೆ: ಮುಂದಿನ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಭಾರತ ಮೂಲದ ಹಾಗೂ ಇನ್ಫೋಸಿಸ್ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ರಿಷಿ ಸುನಕ್ ಜೊತೆಗೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಹೌಸ್ ಆಫ್ ಕಾಮನ್ಸ್ ನಾಯಕ ಪೆನ್ನಿ ಮೊರ್ಡಾಂಟ್ ಮತ್ತು ಜಾನ್ಸನ್ ಅವರ ಹೆಸರುಗಳೂ ಚಾಲ್ತಿಯಲ್ಲಿವೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ದಿಢೀರ್ ರಾಜೀನಾಮೆ: ರಿಷಿ ಸುನಕ್ಗೆ ಚಾನ್ಸ್?