ಮಿಯಾಮಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ 'ದೇಶದ ರಹಸ್ಯ ಕಡತಗಳ ಕದ್ದೊಯ್ದ ಆರೋಪ'ದಲ್ಲಿ ದೋಷಾರೋಪ ಪಟ್ಟಿ ಹಾಕಲಾಗಿದೆ. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಬಳಿಕ ರಹಸ್ಯ ದಾಖಲೆಗಳನ್ನು ಕಳವು ಮಾಡಿದ್ದರು. ಬಳಿಕ ಟ್ರಂಪ್ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಈ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಚಾರ್ಜ್ಶೀಟ್ ಸಿದ್ಧಪಡಿಸಲಾಗಿದೆ.
ಸೇನಾ ಕಾರ್ಯಾಚರಣೆ, ದೇಶ ಮತ್ತು ವಿದೇಶಗಳಲ್ಲಿನ ಅಮೆರಿಕದ ಅಣು ಘಟಕಗಳು ಸೇರಿದಂತೆ ರಾಷ್ಟ್ರೀಯ ರಕ್ಷಣಾ ರಹಸ್ಯ ಮಾಹಿತಿಗಳ ದಾಖಲೆಗಳನ್ನು ಕದ್ದೊಯ್ದ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ. ಇದೀಗ ನ್ಯಾಯಾಂಗ ವಿಚಾರಣೆಗೆ ಆಗಮಿಸುವಂತೆ ಸೂಚಿಸಲಾಗಿದೆ.
ಮುಂದಿನ ವರ್ಷ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಮಾಜಿ ಅಧ್ಯಕ್ಷರಿಗೆ ಈ ಪ್ರಕರಣ ಹಿನ್ನಡೆ ಉಂಟು ಮಾಡುವುದೇ ಎಂದು ವಿಶ್ಲೇಷಿಸಲಾಗಿದೆ. ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಎಲ್ಲಾ ವಿದ್ಯಮಾನಗಳು ಕುತೂಹಲ ಕೆರಳಿಸಿವೆ.
ದೋಷಾರೋಪಣೆಯಲ್ಲೇನಿದೆ: ಟ್ರಂಪ್ ತನ್ನ ಫ್ಲೋರಿಡಾ ಎಸ್ಟೇಟ್‌ನಲ್ಲಿ ಬಾತ್ರೂಮ್ ಮತ್ತು ಶವರ್‌ನಲ್ಲಿ ವರ್ಗೀಕೃತ ದಾಖಲೆಗಳನ್ನು ಅಡಗಿಸಿಟ್ಟಿದ್ದರು. ಜೊತೆಗೆ ಬಾಲ್ ರೂಂ, ಸ್ಟೋರ್‌ರೂಮ್, ಕಚೇರಿ ಮತ್ತು ಮಲಗುವ ಕೋಣೆಯಲ್ಲೂ ಕೆಲ ದಾಖಲೆಗಳನ್ನು ಇಟ್ಟಿದ್ದರು. ದಾಳಿ ವೇಳೆ ಅಕ್ರಮವಾಗಿ ಇಟ್ಟುಕೊಂಡಿದ್ದ ಈ ಎಲ್ಲಾ ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೋಷಾರೋಪಣೆಯಲ್ಲಿ ನಮೂದಿಸಲಾಗಿದೆ.
ಕಡತಗಳನ್ನು ಅಡಗಿಸಿಟ್ಟಿದ್ದ ಕಚೇರಿ, ನಿವಾಸಕ್ಕೆ ಚುನಾವಣೆಯ ಬಳಿಕ ಹಲವಾರು ಅತಿಥಿಗಳು, ಗಣ್ಯರು, ರಾಜಕೀಯ ವ್ಯಕ್ತಿಗಳು ಆಗಮಿಸಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿದೆ. ಟ್ರಂಪ್ ಅವರು ಬಾಲ್ ರೂಂ, ಸ್ನಾನಗೃಹ, ಶವರ್, ಕಚೇರಿ, ಮಲಗುವ ಕೋಣೆ ಮತ್ತು ಶೇಖರಣಾ ಕೊಠಡಿಯಲ್ಲಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಪ್ರಾಸಿಕ್ಯೂಟರ್ ವಾದಿಸಿದ್ದರು.
ಟ್ರಂಪ್ ಹೇಳೋದೇನು?: ತಮ್ಮ ವಿರುದ್ಧ ಕೇಳಿ ಬಂದ ಎಲ್ಲಾ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಅಮೆರಿಕದ ನ್ಯಾಯಾಂಗ ವಿಭಾಗ ಹೊರಿಸಿರುವ ಏಳು ದೋಷಾರೋಪಣೆ ಪಟ್ಟಿಗಳ ನೊಟೀಸ್ ಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಿಯಾಮಿ ನ್ಯಾಯಾಲಯಕ್ಕೆ ಮಂಗಳವಾರ ಬರುವಂತೆ ತಿಳಿಸಲಾಗಿದೆ. ದೇಶದ ಮಾಜಿ ಅಧ್ಯಕ್ಷರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಇದೇ ಮೊದಲು. ತನಿಖೆ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದು ಅಮೆರಿಕದ ಇತಿಹಾಸದಲ್ಲಿಯೇ ಕರಾಳ ದಿನವಾಗಿದೆ. ಮಾಜಿ ಅಧ್ಯಕ್ಷರೊಬ್ಬರಿಗೆ ಈ ರೀತಿ ಸಮನ್ಸ್ ನೀಡುತ್ತಿರುವುದು ಇದೇ ಮೊದಲು. ಭ್ರಷ್ಟ ಬೈಡನ್ ಆಡಳಿತ ನನ್ನ ವಿರುದ್ದ ಹಗೆತನ ಸಾಧಿಸುತ್ತಿದೆ. ಎಲ್ಲ ಅಧ್ಯಕ್ಷರಿಗಿಂತ ಅತೀ ಹೆಚ್ಚು ಮತ ಪಡೆದ, ಈಗಲೂ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆಯಲ್ಲಿದ್ದೇನೆ. ನಾನು ತಪ್ಪು ಮಾಡಿಲ್ಲ. ಎಲ್ಲಾ ಆರೋಪಗಳನ್ನು ಎದುರಿಸುವೆ. ದೇಶ ಸಂಕಷ್ಟದಲ್ಲಿದೆ. ನಾವೆಲ್ಲರೂ ಸೇರಿ ಗಟ್ಟಿಗೊಳಿಸೋಣ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ನಾಲ್ಕು ವರ್ಷ ಕಾಲ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ದೇಶದ ಅತಿ ಗೌಪ್ಯವಾದ 300 ಕ್ಕೂ ಹೆಚ್ಚು ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಜೋ ಬೈಡನ್ ಅಧ್ಯಕ್ಷರಾದ ನಂತರ ಎಲ್ಲಾ ದಾಖಲೆಗಳನ್ನು ಹಿಂದಿರುಗಿಸುವಂತೆ ನ್ಯಾಷನಲ್ ಆರ್ಕೈವ್ಸ್ ಪ್ರಯತ್ನಿಸಿತ್ತು. ಆದರೂ ಟ್ರಂಪ್ ಕಡೆಯಿಂದ ಸೂಕ್ತ ಉತ್ತರ ಬಂದಿರಲಿಲ್ಲ. ನಂತರ ಕೆಲವು ದಾಖಲೆ ನೀಡಿದರೂ ಪೂರ್ಣ ಹಿಂದಿರುಗಿಸಿರಲಿಲ್ಲ. ಉತ್ತರ ಕೊಡದ ಟ್ರಂಪ್ ಮೇಲೆ ಅಮೆರಿಕಾದ ನ್ಯಾಯಾಂಗ ಇಲಾಖೆ 7 ದೋಷಾರೋಪಣೆಗಳನ್ನು ಹೊರಿಸಿ ಸಮನ್ಸ್ ಜಾರಿ ಮಾಡಿದೆ.
ಓದಿ: 700 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಆದೇಶ ರದ್ದು ಮಾಡುವಂತೆ ಕೆನಡಾ ಸಂಸದೀಯ ಸಮಿತಿ ಒತ್ತಾಯ