ವಾಷಿಂಗ್ಟನ್: ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮೂರನೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಹಣ ಅಕ್ರಮ ವರ್ಗಾವಣೆ, ಸರ್ಕಾರಿ ದಾಖಲೆಗಳ ಅಕ್ರಮ ಕ್ರೋಢೀಕರಣ ಕ್ರಿಮಿನಲ್ ಕೇಸ್ ಬಳಿಕ ಶ್ವೇತಭವನದ ಮೇಲೆ ಬೆಂಬಲಿಗರ ಜೊತೆ ದಾಳಿ ವಿಷಯವಾಗಿ ಈಗ ಪ್ರಕರಣ ದಾಖಲಿಸಲಾಗಿದೆ. ಇದರ ವಿರುದ್ಧ ಟೀಕಿಸಿರುವ ಟ್ರಂಪ್, 'ನನ್ನನ್ನು ಅಧ್ಯಕ್ಷೀಯ ಚುನಾವಣೆಯಿಂದ ತಪ್ಪಿಸುವ ಪ್ರಯತ್ನ' ಎಂದು ಆರೋಪಿಸಿದ್ದಾರೆ.
ಅಧ್ಯಕ್ಷರಾಗಿ ನಿರ್ಗಮಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಸರ್ಕಾರದ ರಹಸ್ಯ ದಾಖಲೆಗಳನ್ನು ಮರಳಿಸದೇ ತಮ್ಮ ನಿವಾಸದಲ್ಲಿ ಇಟ್ಟುಕೊಂಡಿದ್ದರು. ಈ ಬಗ್ಗೆ ತನಿಖೆ ಈಗಿನ ಜೋ ಬೈಡನ್ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಿದೆ. ಬಳಿಕ ಅಕ್ರಮ ಹಣ ವರ್ಗಾವಣೆಯಲ್ಲೂ ಕೇಸ್ ಜಡಿಯಲಾಗಿದೆ. ಎರಡೂ ವಿಷಯಗಳ ಮೇಲೆ ಕೇಸ್ ಜರುಗುತ್ತಿದೆ. ಈ ಮಧ್ಯೆ ಮತ್ತೊಂದು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ತನ್ನ ವಿರುದ್ಧ ಪಿತೂರಿ; ಜೋ ಬೈಡನ್ ಸರ್ಕಾರ ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದೆ. ಬೇಕಂತಲೇ ಪಿತೂರಿ ನಡೆಸುತ್ತಿದೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಈ ತಂತ್ರ ರೂಪಿಸಲಾಗಿದೆ. ಇದೆಲ್ಲವನ್ನೂ ನಾನು ಎದುರಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ವಿರುದ್ಧದ ಕೇಸ್ಗಳ ಸ್ಥಿತಿಗತಿ: ರಹಸ್ಯ ದಾಖಲೆಗಳ ಕೇಸ್- ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಬಳಿಕ ತಮ್ಮ ನಿವಾಸದಲ್ಲಿ ಪರಮಾಣು ಘಟಕಗಳು ಸೇರಿದಂತೆ ಮಹತ್ವದ ಸರ್ಕಾರಿ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಪೊಲೀಸ್ ತಪಾಸಣೆಯ ವೇಳೆ ಅವನ್ನು ಶೌಚಾಲಯ, ಕೋಣೆಗಳಲ್ಲಿ ಬಿಸಾಡಿದ್ದು ಕಂಡು ಬಂದಿತ್ತು. ಸುಳ್ಳು ಹೇಳಿಕೆ, ಅಕ್ರಮ ದಾಖಲೆಗಳ ಕ್ರೋಢೀಕರಣ ಸಂಬಂಧ ಕ್ರಿಮಿನಲ್ ಕೇಸ್ ಹಾಕಲಾಗಿದ್ದು, ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದಾರೆ. ಇದರಲ್ಲಿ ಆರೋಪ ಸಾಬೀತಾದರೆ, 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ: ಟ್ರಂಪ್ ಅಧ್ಯಕ್ಷರಾಗಿದ್ದಾಗ ಪೋರ್ನ್ ನಟಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡು ವಿಚಾರ ಯಾರಿಗೂ ತಿಳಿಸದಂತೆ ತಡೆಯಲು ಆಕೆಗೆ ಹಣ ನೀಡಿದ ಕುರಿತಾಗಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇಂತಹ ದೋಷಾರೋಪಣೆ ಕೇಳಿಬಂದ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೂ ಟ್ರಂಪ್ ಒಳಗಾಗಿದ್ದಾರೆ. ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಹಣ ನೀಡಲಾಗಿದೆ ಎಂದು ಸ್ವತಃ ಅಶ್ಲೀಲ ಚಿತ್ರಗಳ ನಟಿಯೇ ಹೇಳಿಕೆ ನೀಡಿದ್ದು, ಟ್ರಂಪ್ಗೆ ಸಂಕಟ ತಂದೊಡ್ಡಿದೆ.
ಕೇಸ್ ಸಾಬೀತಾದಲ್ಲಿ 4 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ. ಈ ಕುರಿತು ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ತಾವು ನಟಿಯೊಂದಿಗೆ ಸಂಪರ್ಕ ಬೆಳೆಸಿಲ್ಲ ಎಂಬುದು ಟ್ರಂಪ್ ವಾದವಾಗಿದೆ.
ಶ್ವೇತಭವನ ಮುತ್ತಿಗೆ ಕೇಸ್: ಇದಾದ ಬಳಿಕ ಈಗ ಟ್ರಂಪ್ ವಿರುದ್ಧ ಹೊಸದಾಗಿ ಮೂರನೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. 2020 ರ ಅಧ್ಯಕ್ಷೀಯ ಚುನಾವಣೆಯ ವೇಳೆ ಅಧ್ಯಕ್ಷ ಜೋ ಬೈಡನ್ ವಿರುದ್ಧ ಸೋಲು ಕಂಡಿದ್ದ ಟ್ರಂಪ್ ಅಧಿಕಾರ ತ್ಯಜಿಸಲು ಒಪ್ಪದೇ, ದೊಂಬಿ ನಡೆಸಿದ್ದರು. ಫಲಿತಾಂಶ ಘೋಷಣೆ ವೇಳೆ ಅವರ ಬೆಂಬಲಿಗರ ಸಮೇತ ಶ್ರೇತಭವನಕ್ಕೆ ಮುತ್ತಿಗೆ ಹಾಕಲಾಗಿತ್ತು.
ಅಧಿಕಾರ ದುರ್ಬಳಕೆ ಮತ್ತು ಕಾನೂನು ವ್ಯತಿರಿಕ್ತ ನಡವಳಿಕೆ ಹಿನ್ನೆಲೆಯಲ್ಲಿ ಟ್ರಂಪ್ ವಿರುದ್ಧ ಕೇಸ್ ಜಡಿಯಲಾಗಿದೆ. ಆಗಸ್ಟ್ ತಿಂಗಳಲ್ಲಿ ಕೇಸ್ ವಿಚಾರಣೆ ಮತ್ತು ತೀರ್ಪು ಬರುವ ನಿರೀಕ್ಷೆ ಇದೆ. ರಿಪಬ್ಲಿಕನ್ ಪಕ್ಷದ ಟ್ರಂಪ್, ಇಂತಹ ಯಾವುದೇ ತಪ್ಪನ್ನು ನಿರಾಕರಿಸಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಮರುಪಡೆಯುವುದನ್ನು ತಡೆಯುವ ಕುತಂತ್ರವಿದು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ - ತಾಲಿಬಾನ್ ಮಾತುಕತೆ: ಮಾನವ ಹಕ್ಕುಗಳ ಪರಿಸ್ಥಿತಿ, ಆಫ್ಘನ್ ಆರ್ಥಿಕತೆ ಕುರಿತು ಚರ್ಚೆ