ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಂದು (ಭಾನುವಾರ) ಸಂಭವಿಸಿದ ಭೀಕರ ರೈಲು ಅವಘಡದಲ್ಲಿ 30 ಪ್ರಯಾಣಿಕರು ಅಸುನೀಗಿದ್ದಾರೆ. ಘಟನೆಯಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ದುರಂತ ಜರುಗಿತು.
"ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲು ನಿಲ್ದಾಣದ ಬಳಿ ಹಜಾರಾ ರೈಲು ಹೊರಡುತ್ತಿದ್ದಾಗ ಅಚಾನಕ್ಕಾಗಿ ಹಳಿ ತಪ್ಪಿದೆ. 8 ರಿಂದ 10 ಬೋಗಿಗಳು ಅಪಘಾತಕ್ಕೀಡಾಗಿವೆ. ಕನಿಷ್ಠ 30 ಜನರು ಸಾವನ್ನಪ್ಪಿ, 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನವಾಬ್‌ಶಾಹ್‌ನಲ್ಲಿರುವ ಪೀಪಲ್ಸ್ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗಾಗಲೇ 15 ಜನರ ಶವಗಳನ್ನು ಹೊರತೆಗೆಯಲಾಗಿದ್ದು, ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ" ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
"ಹಳಿ ತಪ್ಪಿದ 10 ಬೋಗಿಗಳು ಭೀಕರವಾಗಿ ಅಪಘಾತಕ್ಕೀಡಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಬೋಗಿಗಳಲ್ಲಿ ಸಿಲುಕಿರುವ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿವೆ. ಸ್ಥಳೀಯರ ಸಹಾಯದಿಂದ ಪ್ರಯಾಣಿಕರ ರಕ್ಷಣೆಗೆ ಶ್ರಮಿಸಲಾಗುತ್ತಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಅಪಘಾತದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಪಾಕಿಸ್ತಾನ ರೈಲ್ವೆಯ ಉಪ ಅಧೀಕ್ಷಕ ಮಹಮೂದ್ ರೆಹಮಾನ್ ಹೇಳಿದರು.
ಒಡಿಶಾ ರೈಲು ಅಪಘಾತದ ಕಹಿ ನೆನಪು : ಜೂನ್ 2ರಂದು ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿ, ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದವು. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ 290 ಜನರು ಪ್ರಾಣ ಕಳೆದುಕೊಂಡಿದ್ದರು.
ತ್ರಿವಳಿ ರೈಲು ದುರಂತಕ್ಕೆ ತಪ್ಪಾದ ಸಿಗ್ನಲಿಂಗ್ ಮತ್ತು ಸಿಬ್ಬಂದಿಯ ಅಚಾತುರ್ಯವೇ ಕಾರಣ ಎಂದು ಉನ್ನತ ಮಟ್ಟದ ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿತ್ತು. ಅಪಘಾತಕ್ಕೂ ಮುನ್ನ ಬಹುಹಂತಗಳಲ್ಲಿ ತಪ್ಪು ನಡೆದಿದ್ದು ದುರಂತಕ್ಕೆ ಕಾರಣ ಎಂಬುದನ್ನು ಸಮಿತಿ ಪತ್ತೆ ಮಾಡಿತ್ತು.
ಅಪಘಾತದಲ್ಲಿ ಮೃತಪಟ್ಟವರ ಪೈಕಿ 41 ಶವಗಳ ಗುರುತು ಕೂಡ ಪತ್ತೆ ಮಾಡಲಾಗಿಲ್ಲ. ಡಿಎನ್ಎ ಟೆಸ್ಟ್ ಮೂಲಕ ವಾರಸುದಾರರಿಗೆ ಶವ ಹಸ್ತಾಂತರ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದರು.
ಇದನ್ನೂ ಓದಿ: Heroin: ಪಂಜಾಬ್ನಲ್ಲಿ ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್ ಜಪ್ತಿ; ನಾಲ್ವರ ಬಂಧನ, 3 ಪಿಸ್ತೂಲ್ ವಶಕ್ಕೆ