ಕೀವ್(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ರಷ್ಯಾ ದಾಳಿ ತೀವ್ರವಾಗುತ್ತಿದ್ದರೂ ಉಕ್ರೇನ್ ಶರಣಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾದ ಉನ್ನತ ರಾಜತಾಂತ್ರಿಕ ಅಧಿಕಾರಿಯೊಬ್ಬರು ಮೂರನೇ ಮಹಾಯುದ್ಧವನ್ನು ಉಕ್ರೇನ್ ಪ್ರಚೋದಿಸುತ್ತಿದೆ ಎಂದು ಆರೋಪಿಸುತ್ತಿರುವುದು ಮಾತ್ರವಲ್ಲದೇ, ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ರಷ್ಯಾದ ಪಡೆಗಳು ಉಕ್ರೇನಿಯನ್ ನಗರವಾದ ಕ್ರೆಮಿನ್ನಾವನ್ನು ವಶಪಡಿಸಿಕೊಂಡಿವೆ ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಕ್ರೆಮಿನ್ನಾ ನಗರವು ಸಂಪೂರ್ಣವಾಗಿ ರಷ್ಯಾದ ಹತೋಟಿಗೆ ಬಂದಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಉಕ್ರೇನ್‌ನ ಉತ್ತರ ಮತ್ತು ಪೂರ್ವದಿಂದ ರಷ್ಯಾದ ಪಡೆಗಳು ಸ್ಲೋವಿಯನ್ಸ್ಕ್ ಮತ್ತು ಕ್ರಾಮಾಟೋರ್ಸ್ಕ್ ನಗರಗಳ ಕಡೆಗೆ ತೆರಳುವಾಗ ಇಜಿಯಮ್‌ನ ದಕ್ಷಿಣಕ್ಕೆ ಉಕ್ರೇನ್ ಮತ್ತು ರಷ್ಯಾ ಪಡೆಗಳ ನಡುವೆ ಭಾರಿ ಹೋರಾಟ ನಡೆದಿದೆ ಎಂದು ಬ್ರಿಟಿಷ್ ಮಿಲಿಟರಿ ಟ್ವೀಟ್‌ನಲ್ಲಿ ತಿಳಿಸಿದೆ. ಉಕ್ರೇನಿಯನ್ ರಾಜಧಾನಿ ಕೀವ್‌ನ ಆಗ್ನೇಯಕ್ಕೆ 575 ಕಿಲೋಮೀಟರ್ (355 ಮೈಲುಗಳು) ಈ ಕಾಳಗ ನಡೆದಿದೆ ಎಂದು ಬ್ರಿಟಿಷ್ ಮಿಲಿಟರಿ ಹೇಳುತ್ತಿದೆ. ಈ ಕುರಿತು ಉಕ್ರೇನ್ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ.
'ರಷ್ಯಾ ವಿಫಲವಾಗುತ್ತಿದೆ': ಅಮೆರಿಕ ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ. ಅಮೆರಿಕ ಮಾತ್ರವಲ್ಲದೇ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ನೆರವಿಗೆ ಬರುತ್ತಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾಗಿ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಈ ಮೊದಲಿನ ಯುದ್ಧದಲ್ಲಿ ಮತ್ತು ಈ ಯುದ್ಧದಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಮೊದಲಿನ ಅವಧಿಯಲ್ಲಿ ಉಕ್ರೇನ್ ಆದಷ್ಟು ಬೇಗ ಶರಣಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ರಷ್ಯಾ ಯುದ್ಧದ ಪರಿಸ್ಥಿತಿ ಬದಲಾಗುತ್ತಿದ್ದು, ರಷ್ಯಾ ಕಂಗಾಲಾದಂತೆ ಕಾಣುತ್ತಿದೆ. ರಷ್ಯಾ ವಿಫಲವಾಗುತ್ತಿದೆ. ಉಕ್ರೇನ್ ಯಶಸ್ವಿಯಾಗುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿರುವ ಮಾತು. ರಷ್ಯಾದ ಈಗಿನ ಪರಿಸ್ಥಿತಿಗೆ ಸಾಕ್ಷ್ಯ ಒದಗಿಸುವಂತಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲು ಕೀವ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆ್ಯಂಟನಿ ಬ್ಲಿಂಕೆನ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಆ್ಯಂಟನಿ ಬ್ಲಿಂಕೆನ್ ಅವರ ಭೇಟಿಯನ್ನು ಅತ್ಯಂತ ದಿಟ್ಟ ನಿರ್ಧಾರ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲಾಗಿದೆ. ಅಮೆರಿಕ 165 ಮಿಲಿಯನ್ ಅಮೆರಿಕನ್ ಡಾಲರ್ಗಳ ಮೌಲ್ಯದ ಮದ್ದುಗುಂಡುಗಳ ಮಾರಾಟ ಮಾಡಲು ಅನುಮೋದನೆ ನೀಡಿದೆ ಎಂದು ಅಮೆರಿಕ ಹೇಳಿದೆ. ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಉಕ್ರೇನ್ ಸಾರ್ವಭೌಮ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಲು ಬಯಸುತ್ತದೆ. ಆದರೆ ಮತ್ತೊಮ್ಮೆ ರಷ್ಯಾ ಆಕ್ರಮಣದಂಥ ಕೆಲಸಕ್ಕೆ ಮುಂದಾಗಬಾರದು. ಅಂತಹ ದುರ್ಬಲ ಸ್ಥಿತಿಯಲ್ಲಿ ರಷ್ಯಾವನ್ನು ನೋಡಲು ಅಮೆರಿಕ ಬಯಸುತ್ತದೆ ಎಂದು ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
'ರಷ್ಯಾದ ಸೈನ್ಯ ದಣಿದಿದೆ ಎಂಬುದು ಭ್ರಮೆ': ಉಕ್ರೇನ್ ಗೆಲ್ಲಲು ಮತ್ತು ಉಕ್ರೇನ್‌ಗೆ ಇರುವ ಬೆದರಿಕೆಗಳನ್ನು ಕೊನೆಗೊಳಿಸಲು ಅಮೆರಿಕ ಮಿಲಿಟರಿ ಸಹಾಯ ಮಾಡುತ್ತದೆ ಎಂದು ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಲಾಯ್ಡ್ ಆಸ್ಟಿನ್ ಅವರ ಹೇಳಿಕೆ ಅಮೆರಿಕದ ಕಾರ್ಯತಂತ್ರಗಳನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಪಶ್ಚಿಮದ ರಾಷ್ಟ್ರಗಳು ಉಕ್ರೇನ್ ಯುದ್ಧವನ್ನು ಮುಂದುವರಿಸಲು ಬಯಸುತ್ತಿವೆ ಎಂಬ ಭಾವನೆಯನ್ನು ರಷ್ಯಾ ಹೊಂದಿದೆ. ರಷ್ಯಾದ ಸೈನ್ಯ ದಣಿದಿದೆ ಎಂದು ಅವರು ಅಂದುಕೊಂಡಿರಬಹುದು. ಆದರೆ ಅದೊಂದು ಭ್ರಮೆ. ಪಶ್ಚಿಮ ದೇಶಗಳು ಒದಗಿಸುವ ಶಸ್ತ್ರಾಸ್ತ್ರಗಳೇ ನಮ್ಮ ಗುರಿಯಾಗಿರುತ್ತವೆ ಎಂದು ಲಾವ್ರೊವ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಕೆಲವು ಶಸ್ತ್ರಾಸ್ತ್ರಗಳ ಗೋದಾಮುಗಳ ಮೇಲೆ ನಡೆದ ದಾಳಿಯನ್ನು ನಾವಿಲ್ಲಿ ನೆನೆಯಬಹುದು.
ನ್ಯಾಟೋ ಒಕ್ಕೂಟವನ್ನು ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಉಕ್ರೇನ್ ನಾಯಕರು ನ್ಯಾಟೋಗೆ ಮನವಿ ಮಾಡುತ್ತಿದ್ದಾರೆ. ಈ ಮೂಲಕವೇ ರಷ್ಯಾವನ್ನು ಪ್ರಚೋದಿಸಲಾಗುತ್ತಿದೆ. ಪ್ರಾಕ್ಸಿಗಳ ಮೂಲಕ ಈಗಾಗಲೇ ನ್ಯಾಟೋ ಯುದ್ಧಕ್ಕೆ ಪ್ರವೇಶ ಪಡೆಯಲು ಸಜ್ಜಾಗುತ್ತಿದೆ ಎಂದು ಲಾವ್ರೊವ್ ಹೇಳಿದ್ದಾರೆ. ನ್ಯಾಟೋ ಪಡೆಗಳು ಬೆಂಕಿಯ ಮೇಲೆ ಎಣ್ಣೆಯನ್ನು ಸುರಿಸುತ್ತಿವೆ ಎಂದು ಲಾವ್ರೊವ್ ಆರೋಪಿಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
'ರಷ್ಯಾ ಜಗತ್ತನ್ನೆದುರಿಸುವ ಭರವಸೆ ಕಳೆದುಕೊಳ್ಳುತ್ತದೆ': ಯಾವುದೇ ಸಂದರ್ಭದಲ್ಲಿ ನಾವು ಮೂರನೇ ಮಹಾಯುದ್ಧ ನಡೆಯಲು ಬಿಡುವುದಿಲ್ಲ ಎಂದು ಮಂತ್ರಗಳನ್ನು ಪಠಿಸುತ್ತಿದ್ದೇವೆ ಎಂದು ರಷ್ಯಾದ ದೂರದರ್ಶನ ಸಂದರ್ಶನದಲ್ಲಿ ಲಾವ್ರೊವ್ ಹೇಳಿದ್ದಾರೆ. ಪರಮಾಣು ದಾಳಿಯನ್ನು ನೋಡಲು ಬಯಸುವುದಿಲ್ಲ ಎಂದಿದ್ದಾರೆ. ಉಕ್ರೇನ್‌ಗೆ ಜಗತ್ತಿನ ರಾಷ್ಟ್ರಗಳು ಬೆಂಬಲ ನೀಡುವುದರಿಂದ ರಷ್ಯಾ ಜಗತ್ತನ್ನು ಎದುರಿಸುವ ಕೊನೆಯ ಭರವಸೆಯನ್ನು ಕಳೆದುಕೊಳ್ಳುತ್ತವೆ. ಇದರರ್ಥ ರಷ್ಯಾ ಉಕ್ರೇನ್‌ನಲ್ಲಿ ಸೋಲನ್ನು ಅನುಭವಿಸುತ್ತದೆ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದಾಗ, ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳುವುದು ಅದರ ಸ್ಪಷ್ಟ ಗುರಿಯಾಗಿತ್ತು. ಆದರೆ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನಿಯನ್ ಸೈನ್ಯ ಪುಟಿನ್ ಸೈನ್ಯವನ್ನು ಹಿಮ್ಮೆಟ್ಟುವಂತೆ ಮಾಡಿದ್ದಾರೆ. ಪೂರ್ವ ಉಕ್ರೇನ್‌ನಲ್ಲಿ ಹೆಚ್ಚಾಗಿ ರಷ್ಯಾದ ಮಾತನಾಡುವ ಡಾನ್‌ಬಾಸ್ ಅನ್ನು ತೆಗೆದುಕೊಳ್ಳುವುದು ತನ್ನ ಗುರಿಯಾಗಿದೆ ಎಂದು ರಷ್ಯಾ ಈಗ ಹೇಳುತ್ತಿದೆ. ಇತ್ತೀಚೆಗೆ ಮಧ್ಯ ಮತ್ತು ಪಶ್ಚಿಮ ಉಕ್ರೇನ್‌ನಲ್ಲಿನ ಐದು ರೈಲು ನಿಲ್ದಾಣಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಉಕ್ರೇನ್‌ನ ರಾಜ್ಯ ರೈಲ್ವೆಯ ಮುಖ್ಯಸ್ಥ ಒಲೆಕ್ಸಾಂಡರ್ ಕಮಿಶಿನ್ ಹೇಳಿದ್ದಾರೆ.
ಇನ್ನೂ ಕೆಲವೆಡೆ ಉಕ್ರೇನಿಯನ್ನರು ಹಿಂಸಾಚಾರದಿಂದ ಬೇರೆ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ. ಮಧ್ಯ ವೈನ್ನಿಟ್ಸಿಯಾ ಪ್ರದೇಶದಲ್ಲಿ ರಷ್ಯಾದ ದಾಳಿಯಿಂದ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ಪಡೆ ಕ್ರೆಮೆನ್ಚುಕ್, ಮಧ್ಯ ಉಕ್ರೇನ್‌ನಲ್ಲಿನ ತೈಲ ಸಂಸ್ಕರಣಾಗಾರ ಮತ್ತು ಇಂಧನ ಡಿಪೋಗಳನ್ನು ನಾಶಪಡಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ಒಟ್ಟಾರೆ ರಷ್ಯಾದ ಯುದ್ಧವಿಮಾನಗಳು ತೈಲ ಸಂಸ್ಕರಣಾಗಾರ ಅಥವಾ ಇಂಧನ ಡಿಪೋಗಳಂಥಹ 56 ಉಕ್ರೇನ್ ಗುರಿಗಳನ್ನು ನಾಶಪಡಿಸಿವೆ ಎಂದು ರಷ್ಯಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮರಿಯುಪೋಲ್ ಬಂದರು ತೆರವಿಗೆ ರಷ್ಯಾ ಮೇಲೆ ಒತ್ತಡ ಹೇರಿ: ಯುಎನ್ಗೆ ಉಕ್ರೇನ್ ಮನವಿ