ಕಾಬೂಲ್: ಕೆಲ ದಿನಗಳ ಹಿಂದೆ ಅಫ್ಘಾನಿಸ್ಥಾನದಲ್ಲಿರುವ ಸಿಖ್ಖರ ಪವಿತ್ರ ಸ್ಥಳ ಗುರುದ್ವಾರದ ಮೇಲೆ ದಾಳಿ ನಡೆಸಲಾಗಿತ್ತು. ಇದಲ್ಲದೇ, ಸಿಖ್ಖರು ಮತ್ತು ಹಿಂದುಗಳ ಮೇಲೆ ಆ ನಾಡಿನಲ್ಲಿ ಪದೇ ಪದೆ ದೌರ್ಜನ್ಯಗಳು ನಡೆಯುತ್ತಿವೆ. ಇದರಿಂದ ಹೆದರಿ ದೇಶ ಬಿಟ್ಟಿದ್ದ ಭಾರತೀಯರು ಮತ್ತು ಸಿಖ್ಖರನ್ನು ಇದೀಗ ತಾಲಿಬಾನ್ ಸರ್ಕಾರ ಮತ್ತೆ ವಾಪಸ್ಸಾಗಲು ಕೋರಿದೆ. ಸೂಕ್ತ ಭದ್ರತೆಯನ್ನು ನೀಡಲಾಗುವುದು ಎಂದು ಭರವಸೆಯ ಮಾತಾಡಿದೆ.
ಈ ಕುರಿತು ತಾಲಿಬಾನ್ ಸರ್ಕಾರದ ಅಧಿಕಾರಿಯೊಬ್ಬರು ಹಿಂದು ಮತ್ತು ಸಿಖ್ ಸಮುದಾಯದ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸೂಕ್ತ ಭದ್ರತಾ ವ್ಯವಸ್ಥೆಯನ್ನು ನೀಡಲಾಗುವುದು ಎಂದು ತಿಳಿಸಿದ್ದರು. ಬಳಿಕ ಈ ಬಗ್ಗೆ ಸರ್ಕಾರ ಟ್ವೀಟ್ ಮಾಡಿ ಭಾರತೀಯರು ಮತ್ತು ಸಿಖ್ಖರು ಮತ್ತೆ ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿ ಎಂದು ಒತ್ತಾಯಿಸಿದೆ.
ದೇಶದಲ್ಲಿ ಭದ್ರತೆ ಸ್ಥಾಪಿಸಲಾಗಿದೆ. ಕಾಬೂಲ್‌ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ದಾಳಿಯನ್ನು ಸಮರ್ಥವಾಗಿ ತಡೆದಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‌ಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅದು ಹೇಳಿಕೊಂಡಿದೆ.
ಜೂನ್ 18 ರಂದು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತ್ತು. ದಾಳಿಯಲ್ಲಿ ಓರ್ವ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ಕ್ರಿಶ್ಚಿಯನ್ನರು ಇಲ್ಲದಿದ್ರೆ ತಮಿಳುನಾಡು ಬಿಹಾರವಾಗ್ತಿತ್ತು: ಡಿಎಂಕೆ ನಾಯಕನ ಹೇಳಿಕೆ ವಿವಾದ