ವಾಷಿಂಗ್ಟನ್: ಜಗತ್ತಿನಾದ್ಯಂತ ಅಮೆರಿಕಾ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ಎತ್ತಿ ತೋರಿಸಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಬೀಜಿಂಗ್ ಏನಾದರೂ ಬೆದರಿಕೆ ಒಡ್ಡಿದರೆ ಸಾರ್ವಭೌಮತ್ವದ ರಕ್ಷಣೆಗಾಗಿ ವಾಷಿಂಗ್ಟನ್ ಕ್ರಮ ಕೈಗೊಳ್ಳುತ್ತದೆ ಎಂದು ಚೀನಾ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ. ರಿಪಬ್ಲಿಕನ್ನರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೇಲೆ ಹಿಡಿತ ಸಾಧಿಸಿದ ನಂತರ ವಿಭಜಿತಗೊಂಡ ಕಾಂಗ್ರೆಸ್‌ನಲ್ಲಿ ಮಂಗಳವಾರ ತಮ್ಮ ಮೊದಲ ಪ್ರಮುಖ ಭಾಷಣದ ವೇಳೆ ಬೈಡೆನ್ ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಚೀನಾ ದೇಶ ನಮ್ಮ ಸಾರ್ವಭೌಮತ್ವಕ್ಕೆ ಏನಾದರೂ ಧಕ್ಕೆ ತಂದರೆ ನಾವು ನಮ್ಮ ದೇಶದ ರಕ್ಷಣೆಗಾಗಿ ಕಠಿಣ ಕ್ರಮ ವಹಿಸುತ್ತೇವೆ. ಚೀನಾದೊಂದಿಗಿನ ಸ್ಪರ್ಧೆಯನ್ನು ಗೆಲ್ಲುವ ಮೂಲಕ ನಾವೆಲ್ಲರೂ ಒಗ್ಗೂಡಬೇಕು. ಪ್ರಪಂಚದಾದ್ಯಂತ ನಾವು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಿವೆಯೇ ಹೊರತು ದುರ್ಬಲವಾಗಿಲ್ಲ ಎಂದು ಹೇಳಿದರು.
ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಚೀನಾ ಯಾವ ರೀತಿ ತನ್ನ ಶಕ್ತಿಯನ್ನು ಬಲಪಡಿಸಿಕೊಂಡು ಬಂದಿದೆ ಹಾಗೂ ಅಮೆರಿಕಾ ಜಾಗತಿಕವಾಗಿ ಯಾವ ರೀತಿ ಕುಸಿದುಕೊಂಡು ಬಂದಿದೆ. ಆದರೆ ಇದು ಇನ್ನು ಮುಂದೆ ಸಾಧ್ಯವಿಲ್ಲ. ನಾವು ಸ್ಪರ್ಧೆಯನ್ನು ಬಯಸುತ್ತೇವೆಯೇ ಹೊರತು ಸಂಘರ್ಷವನ್ನಲ್ಲ ಎಂದು ನಾನು ಈಗಾಗಲೇ ಅಧ್ಯಕ್ಷ ಕ್ಸಿ ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದು ರಾಜಧಾನಿಯಲ್ಲಿ ತಮ್ಮ ಎರಡನೇ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಜೋ ಬೈಡೆನ್ ಹೇಳಿದರು.
ಚೀನಾ ಅಥವಾ ವಿಶ್ವದ ಬೇರೆ ಯಾವುದೇ ದೇಶಗಳೊಂದಿಗೆ ಸ್ಪರ್ಧಿಸಲು ದಶಕಗಳಿಂದಲೇ ಅಮೆರಿಕಾ ಪ್ರಬಲ ಸ್ಥಾನದಲ್ಲಿದೆ. ಅಮೆರಿಕಾವನ್ನು ಇನ್ನಷ್ಟು ಪ್ರಬಲಗೊಳಿಸಲು ನಾವು ಹೂಡಿಕೆ ಮಾಡುತ್ತಿದ್ದೇವೆ ಎಂಬುದಕ್ಕೆ ನಾನು ಯಾವುದೇ ಕ್ಷಮೆಯಾಚಿಸುವುದಿಲ್ಲ. ಅಮೆರಿಕಾದ ಆವಿಷ್ಕಾರಗಳ ಮೇಲೆ ಹೂಡಿಕೆ ಮಾಡುವುದು, ಭವಿಷ್ಯವನ್ನು ವ್ಯಾಖ್ಯಾನಿಸುವ ಉದ್ಯಮಗಳ ಮೇಲೆ ಹೂಡಿಕೆ ಮಾಡಲಾಗುವುದು.
ಆದರೆ ಚೀನಾ ಸರ್ಕಾರ ಪ್ರಾಬಲ್ಯ ಸಾಧಿಸುವ ಉದ್ದೇಶ ಹೊಂದಿದೆ. ನಮ್ಮ ಮುಂದುವರಿದ ತಂತ್ರಜ್ಞಾನಗಳನ್ನು ರಕ್ಷಿಸಲು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುವುದರಿಂದ ಅವುಗಳನ್ನು ನಮ್ಮ ವಿರುದ್ಧ ಬಳಸಿಕೊಳ್ಳಲು ಸಾಧ್ಯವಿಲ್ಲ. ಸ್ಥಿರತೆ ಕಾಪಾಡಿಕೊಳ್ಳಲು ಹಾಗೂ ಆಕ್ರಮಣಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಮಿಲಿಟರಿಯನ್ನು ಆಧುನೀಕರಿಸಲಾಗುತ್ತಿದೆ ಎಂದು ಬೈಡೆನ್ ತಿಳಿಸಿದರು.
ಚೀನಾ ಅಮೆರಿಕಾದ ಹಿತಾಸಕ್ತಿಯ ಬೆಳವಣಿಗೆಗೆ ಹಾಗೂ ಜಗತ್ತಿಗೆ ಉಪಯೋಗುವಂತಹದ್ದನ್ನು ಮಾಡುತ್ತದೆಯಾದರೆ ಚೀನಾದೊಂದಿಗೆ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ನನ್ನ ಆಶಯ ಚೀನಾದೊಂದಿಗೆ ಸ್ಪರ್ಧೆ ಗೆಲ್ಲುವುದು ನಮ್ಮೆಲ್ಲರನ್ನು ಒಂದುಗೂಡಿಸಬೇಕು ಅಷ್ಟೆ. ರಿಪಬ್ಲಿಕನ್ ಸ್ನೇಹಿತರೇ, ನಾವು ಒಟ್ಟಿಗೆ ಕೆಲಸ ಮಾಡಬಹುದು ಎಂದು ಹೇಳಿದರು.
ಡೆಮೋಕ್ರಾಟ್‌ಗಳು ಮತ್ತು ರಿಪಬ್ಲಿಕನ್‌ಗಳು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಮಗೆ ಆಗಾಗ್ಗೆ ಹೇಳಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ, ನಾವು ಅವರ ಮಾತುಗಳು ತಪ್ಪು ಎಂದು ಸಾಬೀತುಪಡಿಸಿದ್ದೇವೆ ಎಂದು ಅವರು ಉಭಯಪಕ್ಷೀಯ ಬೆಂಬಲದೊಂದಿಗೆ ಅಂಗೀಕರಿಸಿದ ಹಲವಾರು ಕಾನೂನುಗಳನ್ನು ಸೂಚಿಸಿದರು.
ಕೆಲವು ದಿನಗಳ ಹಿಂದೆ ಚೀನಾದ ಶಂಕಿತ ಬೇಹುಗಾರಿಕಾ ಬಲೂನ್ ಅಮೆರಿಕದ ವಾಯುಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಅಧ್ಯಕ್ಷ ಜೋ ಬೈಡೆನ್ ಸೂಚನೆ ಮೇರೆ ಅಮರಿಕಾ ಸೇನೆ ಹೊಡೆದುರುಳಿಸಿತ್ತು. ಇದರ ನಂತರ ಯುಎಸ್ ಮತ್ತು ಚೀನಾ ನಡುವಿನ ಸಂಬಂಧ ಹದಗೆಡಲು ಪ್ರಾರಂಭಿಸಿತ್ತು. ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಅವರ ಬೀಜಿಂಗ್ ಕೌಂಟರ್ ವೀ ಫೆಂಘೆ ನಡುವಿನ ದೂರವಾಣಿ ಕರೆಗಾಗಿ ವಾಷಿಂಗ್ಟನ್ ಮಾಡಿದ ಮನವಿಯನ್ನು ಚೀನಾ ತಿರಸ್ಕರಿಸಿದೆ ಎಂದು ವರದಿಯಾಗಿದೆ. ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಶಂಕಿತ ಚೀನೀ ಪತ್ತೇದಾರಿ ಬಲೂನ್ ಅನ್ನು ಯುಎಸ್ ಯುದ್ಧ ವಿಮಾನ ಹೊಡೆದುರುಳಿಸಿದ ಕೂಡಲೇ ಶನಿವಾರವೇ ಈ ಮನವಿಯನ್ನು ಅಮೆರಿಕಾ ಮಾಡಿತ್ತು.
ಪತ್ತೇದಾರಿ ಬಲೂನ್ ಹೊಡೆದುರುಳಿಸಿದ್ದನ್ನು ಚೀನಾ ಅಂತಾರಾಷ್ಟ್ರೀಯ ಗಂಭೀರ ಉಲ್ಲಂಘನೆ ಎಂದು ಚೀನಾ ಹೇಳಿಕೊಂಡಿತ್ತು. ಚೀನಾ ಅಮೆರಿಕಾ ದೇಶಕ್ಕೆ ಮುಂದಿನ ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೆ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಕಳೆದ ವಾರಾಂತ್ಯದಲ್ಲಿ ಕೈಗೊಳ್ಳಬೇಕಿದ್ದ ಬೀಜಿಂಗ್ ಪ್ರವಾಸವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ: ಚೀನಾದ ಶಂಕಿತ ಬಲೂನ್ ಪಶ್ಚಿಮ ಅಮೆರಿಕದಲ್ಲಿ ಪತ್ತೆ...!