ಖೈಬರ್ ಪಖ್ತುಂಖ್ವಾ (ಪಾಕಿಸ್ತಾನ): ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪಾಕಿಸ್ತಾನ ಸರ್ಕಾರ ಆಗಸ್ಟ್ 30 ರವರೆಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಸ್ವಾತ್ ನದಿ ಮತ್ತು ಅದರ ಉಪನದಿಗಳ ಹರಿವಿನ ಮಟ್ಟ 2,27,899 ಕ್ಯೂಸೆಕ್ ತಲುಪಿದ್ದರಿಂದ ಸ್ವಾತ್, ಶಾಂಗ್ಲಾ, ಮಿಂಗೋರಾ, ಕೊಹಿಸ್ತಾನ್ ಮತ್ತು ಇತರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೋಟೆಲ್‌ಗಳು, ಸಂಪರ್ಕ ರಸ್ತೆಗಳು, ತೂಗು ಸೇತುವೆಗಳು, ಮನೆಗಳು, ಆಸ್ಪತ್ರೆಗಳು, ಶಾಲೆಗಳು, ಮಿನಿ ಪವರ್ ಸ್ಟೇಷನ್‌ಗಳು ಮತ್ತು ನೀರಿನ ಗಿರಣಿಗಳು ಸಂಪೂರ್ಣವಾಗಿ ಕೊಚ್ಚಿಹೋಗುತ್ತಿವೆ. ಈ ಸಂಬಂಧದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಂಡಿಯಾಗಿ ಹರಿದಾಡುತ್ತಿದ್ದು, ಪಾಕಿಸ್ತಾನದಲ್ಲಿನ ಭೀಕರ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.
ಭಾರಿ ಮಳೆಗೆ 937 ಜನ ಬಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಪ್ರಕಾರ, ಪಾಕಿಸ್ತಾನವು ಆಗಸ್ಟ್‌ನಲ್ಲಿ 166.8 ಮಿಮೀ ಮಳೆಯಾಗಿದೆ. ಸರಾಸರಿ 241 ಶೇಕಡಾ ಮಳೆ ಹೆಚ್ಚಳವಾಗಿದೆ. ಜೂನ್ 14 ರಿಂದ ಪಾಕಿಸ್ತಾನದಾದ್ಯಂತ ಮಳೆ ಮತ್ತು ಪ್ರವಾಹದಿಂದಾಗಿ ಇದುವರೆಗೆ 937 ಜನರು ಸಾವನ್ನಪ್ಪಿದ್ದಾರೆ ಮತ್ತು 1,293 ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ದಕ್ಷಿಣ ಭಾಗದ ಸಿಂಧ್‌ನ 23 ಜಿಲ್ಲೆಗಳನ್ನು ವಿಪತ್ತು ಪೀಡಿತ ಜಿಲ್ಲೆಗಳೆಂದು ಎಂದು ಘೋಷಿಸಲಾಗಿದೆ. ಎನ್ಡಿಎಮ್ಎ ವರದಿ ಪ್ರಕಾರ, ಸಿಂಧ್ ಪ್ರಾಂತ್ಯದಲ್ಲಿ ಮಳೆಯಿಂದ 306 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಲೂಚಿಸ್ತಾನದಲ್ಲಿ 234 ಸಾವುಗಳು ವರದಿಯಾಗಿದ್ದು, ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್‌ನಲ್ಲಿ ಕ್ರಮವಾಗಿ 185 ಮತ್ತು 165 ಸಾವುಗಳು ದಾಖಲಾಗಿವೆ.
ದಯಮಾಡಿ ನೆರವು ನೀಡಿ: ಪ್ರವಾಹ ಸಂತ್ರಸ್ತರ ನೆರವಿಗಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ದೇಶಗಳಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ವಿಶ್ವಬ್ಯಾಂಕ್ ದೇಶದ ನಿರ್ದೇಶಕ ನಜಿ ಬೆನ್ಹಸ್ಸಿನ್ ಅವರು ವಿಶ್ವಬ್ಯಾಂಕ್‌ನಿಂದ 350 ಮಿಲಿಯನ್ ಯುಎಸ್ ಡಾಲರ್ಗಳ ತಕ್ಷಣದ ನೆರವು ನೀಡಿದೆ.
ಹಾನಿಯ ಅಂದಾಜಿನ ನಂತರ ಮೂಲ ಸೌಕರ್ಯಗಳ ಮರುಸ್ಥಾಪನೆಗಾಗಿ ಸಮಗ್ರ ಯೋಜನೆಯ ಮೂಲಕ ವಿಶ್ವಬ್ಯಾಂಕ್ ಪಾಕಿಸ್ತಾನದೊಂದಿಗೆ ಸಹಕರಿಸುತ್ತದೆ ಎಂದು ಬೆನ್ಹಸ್ಸಿನ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವರ್ಲ್ಡ್ ಫುಡ್ ಪ್ರೋಗ್ರಾಂ (ಡಬ್ಲ್ಯುಎಫ್‌ಪಿ) ಸಹ ಪ್ರವಾಹ ಸಂತ್ರಸ್ತರಿಗೆ 110 ಮಿಲಿಯನ್ ಅಮೆರಿಕನ್ ಡಾಲರ್ಗಳ ಸಹಾಯವನ್ನು ಘೋಷಿಸಿದೆ.
ಎನ್‌ಡಿಎಂಎಯಲ್ಲಿ ಪ್ರಧಾನಿ ಷರೀಫ್ ಅವರು ವಾರ್ ರೂಮ್ ಸ್ಥಾಪಿಸಿದ್ದಾರೆ ಎಂದು ಹವಾಮಾನ ಬದಲಾವಣೆ ಸಚಿವ ಶೆರ್ರಿ ರೆಹಮಾನ್ ಗುರುವಾರ ತಿಳಿಸಿದ್ದಾರೆ. ದೇಶಾದ್ಯಂತ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಹೆಲಿಕಾಪ್ಟರ್ ಮೂಲಕ ಕಾರ್ಯಚರಣೆ ಮಾಡಲು ತೊಡಕಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ : ಭಾರತೀಯ ಅಮೆರಿಕನ್ನರ ಮೇಲೆ ಹಲ್ಲೆ ನಡೆಸಿದ ಮೆಕ್ಸಿಕನ್ ಮಹಿಳೆ.. ವಿಡಿಯೋ ವೈರಲ್