ಕೊಲಂಬೊ(ಶ್ರೀಲಂಕಾ): ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಭಣಗೊಂಡಿರುವ ಪರಿಣಾಮ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ನಿನ್ನೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಕುಟುಂಬದೊಂದಿಗೆ ಪಲಾಯನ ಮಾಡಿರುವ ಅವರು, ಸುರಕ್ಷತೆಗೋಸ್ಕರ ನೌಕಾನೆಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಂದಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಪ್ರತಿಭಟನೆ ಮತ್ತಷ್ಟು ಉಲ್ಭಣಗೊಂಡಿದ್ದು, ಸಾವಿರಾರು ಜನರು ರಸ್ತೆಗಿಳಿದು, ಮಹಿಂದ ರಾಜಪಕ್ಸೆ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದ್ದಾರೆ. ರಾಜಪಕ್ಸೆ ವಿರುದ್ಧ ಪ್ರತಿಭಟನೆ ಹೆಚ್ಚಾಗಿರುವ ಕಾರಣ ಅವರು ಕುಟುಂಬದೊಂದಿಗೆ ಪಲಾಯನ ಮಾಡಿದ್ದು, ದ್ವೀಪ ರಾಷ್ಟ್ರದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯಲ್ಲಿರುವ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಲಂಕಾ ಉದ್ವಿಗ್ನ: ರಾಜಪಕ್ಸ ಕುಟುಂಬದ ಪೂರ್ವಜರ ಮನೆಗೆ ಪ್ರತಿಭಟನಾಕಾರರಿಂದ ಬೆಂಕಿ
ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಕೊಂಡೊಯ್ಯಲಾಗಿದೆ ಎಂದು ಆಪ್ತ ವಲಯಗಳಿಂದ ತಿಳಿದು ಬಂದಿದೆ. ಇದು ಕೊಲಂಬೊದಿಂದ 270 ಕಿಲೋ ಮೀಟರ್ ದೂರದಲ್ಲಿದೆ. ಮಾಜಿ ಪ್ರಧಾನಿ ರಾಜಪಕ್ಸೆ ಅವರ ಪತ್ನಿ ಶ್ರೀನಾಥಿ, ಮಗ ರೋಹಿತಾ ಹಾಗೂ ಇತರ ಸದಸ್ಯರು ಪ್ರಧಾನಿ ಕಚೇರಿಯಿಂದ ಬಿಗಿ ಭದ್ರತೆಯಲ್ಲಿ ತೆರಳಿದ್ದಾರೆ. ಇನ್ನು ರಾಜಪಕ್ಸೆ ಅವರ ಎರಡನೇ ಮಗ ಯೋಸಿತ್ ತಮ್ಮ ಕುಟುಂಬದೊಂದಿಗೆ ಸೋಮವಾರವೇ ಶ್ರೀಲಂಕಾ ತೊರೆದಿದ್ದಾರೆ.
ಶ್ರೀಲಂಕಾದಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಕಾರಣ ಆಡಳಿತರೂಢ ಪಕ್ಷದ ಓರ್ವ ಸಂಸದ ಸೇರಿ ಐವರು ದುರ್ಮರಣಕ್ಕೀಡಾಗಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.