ಕೊಲಂಬೊ: ಶ್ರೀಲಂಕಾದಲ್ಲಿ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಆಹಾರ, ವಿದ್ಯುತ್, ಔಷಧ ಕೊರತೆಯಿಂದ ದೇಶದ ಪ್ರಜೆಗಳು ನಲುಗಿದ್ದಾರೆ. ಹೀಗಾಗಿ, ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ, ಈ ವಾರವೇ ಹೊಸ ಸಂಪುಟ ರಚನೆ ಮಾಡಿ, ನೂತನ ಪ್ರಧಾನಿ ನೇಮಕ ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಭರವಸೆ ನೀಡಿದ್ದಾರೆ.
ಬುಧವಾರ ರಾತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಸಂಪೂರ್ಣ ಬಹುಮತ ಹೊಂದಿರುವ ಸಂಪುಟವನ್ನು ಮತ್ತು ಪ್ರಧಾನಿಯನ್ನು ಈ ವಾರವೇ ನೇಮಿಸುತ್ತೇನೆ. ಸಂಸತ್ತಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಸಂವಿಧಾನದ 19ನೇ ತಿದ್ದುಪಡಿಯ ವಿಷಯವನ್ನು ಜಾರಿಗೆ ತರಲು ಸಂವಿಧಾನಾತ್ಮಕ ತಿದ್ದುಪಡಿಯನ್ನು ಜಾರಿಗೆ ತರಲಾಗುವುದು. ಜೊತೆಗೆ ಹೊಸ ಪ್ರಧಾನಿಗೆ ದೇಶವನ್ನು ಮುನ್ನಡೆಸಲು ಅಗತ್ಯವಾದ ಅಧಿಕಾರವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
'ಯಾವುದೇ ರಾಜಪಕ್ಸಗಳಿಲ್ಲದೆ ಯುವ ಕ್ಯಾಬಿನೆಟ್ ಅನ್ನು ನೇಮಿಸುತ್ತೇನೆ ಎಂದು ಹೇಳಿದ ಗೋಟಬಯ, ದೇಶವು ಅರಾಜಕತೆಗೆ ಜಾರುವುದನ್ನು ತಡೆಯಲು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ಜೊತೆಗೆ ನೂತನ ಸರ್ಕಾರದ ಪ್ರಧಾನಿಗೆ ಹೊಸ ಕಾರ್ಯಕ್ರಮವನ್ನು ರೂಪಿಸಲು ಮತ್ತು ಈ ದೇಶವನ್ನು ಮುನ್ನಡೆಸಲು ಅವಕಾಶವನ್ನು ನೀಡಲಾಗುವುದು' ಎಂದು ಅವರು ತಿಳಿಸಿದರು.
"ಈ ವಾರದ ಆರಂಭದಲ್ಲಿ ರಾಷ್ಟ್ರದಲ್ಲಿ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ಗೊಟಬಯ, ಮೇ 9 ರಂದು ನಡೆದಿರುವ ಕೊಲೆ, ಹಲ್ಲೆ, ಬೆದರಿಕೆಯ ಕೃತ್ಯಗಳು, ಆಸ್ತಿ ನಾಶ ಅತ್ಯಂತ ದುರಾದೃಷ್ಟಕರ ಸಂಗತಿ. ಇಂತಹ ಹೇಯ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ" ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಪ್ರತಿ ಪಕ್ಷಗಳಿಗೆ ಆಹ್ವಾನವಿತ್ತ ಅಧ್ಯಕ್ಷ