ಕೊಲೊಂಬೋ: ದೇಶದ ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ಶ್ರೀಲಂಕಾದ ಸಚಿವ ಸಂಪುಟ ಇಂದು ತನ್ನ ಸಂವಿಧಾನದ ಮಹತ್ವದ 21ನೇ ತಿದ್ದುಪಡಿಯನ್ನು ಅಂಗೀಕರಿಸಿದೆ. ಈ ತಿದ್ದುಪಡಿಯು ಸಂವಿಧಾನದ 20A ಅನ್ನು ರದ್ದುಗೊಳಿಸಲಿದೆ. ಇದು ಸಂಸತ್ತನ್ನು ಬಲಪಡಿಸಿದ್ದ 19ನೇ ತಿದ್ದುಪಡಿಯನ್ನು ರದ್ದುಗೊಳಿಸಿದ ನಂತರ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ಅನಿಯಂತ್ರಿತ ಅಧಿಕಾರವನ್ನು ನೀಡಿತ್ತು.
ಹೊಸ ಸಾಂವಿಧಾನಿಕ ತಿದ್ದುಪಡಿಯನ್ನು ಇಂದು ಕ್ಯಾಬಿನೆಟ್‌ನಲ್ಲಿ ಮಂಡಿಸಲಾಗಿದ್ದು, ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು. ಬಹುನಿರೀಕ್ಷೆಯ ತಿದ್ದುಪಡಿಯನ್ನು ಜಾರಿಗೆ ತಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಪ್ರವಾಸೋದ್ಯಮ ಮತ್ತು ಭೂಸಾರಿಗೆ ಸಚಿವ ಹರಿನ್ ಫರ್ನಾಂಡೋ ಟ್ವೀಟ್ ಮಾಡಿದ್ದಾರೆ. ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ ಪಕ್ಷದ (SLPP) ಒಂದು ವಿಭಾಗವು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸದೆ 21A ತರಬಾರದು ಎಂದು ಒತ್ತಾಯಿಸಿತ್ತು.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಸಂವಿಧಾನದ 21ನೇ ತಿದ್ದುಪಡಿಗಾಗಿ ಶ್ರಮವಹಿಸಿದ್ದು, ಇದು ಅಭೂತಪೂರ್ವ ರಾಜಕೀಯ ಪ್ರಕ್ಷುಬ್ಧತೆ, ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಆಡಳಿತದಲ್ಲಿ ಸಂಸತ್ತಿನ ಪಾತ್ರವನ್ನು ಹೆಚ್ಚಿಸಲಿದೆ. ಇದರ ಜೊತೆಗೆ, ದೇಶದ ಅಧ್ಯಕ್ಷರ ಅನಿಯಮಿತ ಅಧಿಕಾರವನ್ನು ನಿರ್ಬಂಧಿಸುತ್ತದೆ.
2020ರ ಆಗಸ್ಟ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯ ಸಾಧಿಸಿದ ನಂತರ ಪ್ರಬಲರಾಗಿರುವ ರಾಜಪಕ್ಸ ಕುಟುಂಬವು ಅಧಿಕಾರದ ಮೇಲೆ ತಮ್ಮ ಹಿಡಿತ ಬಿಗಿಗೊಳಿಸಿತ್ತು. ಇದು ಅಧ್ಯಕ್ಷೀಯ ಅಧಿಕಾರವನ್ನು ಪುನಃಸ್ಥಾಪಿಸಲು ಮತ್ತು ಕುಟುಂಬದ ನಿಕಟ ಸದಸ್ಯರನ್ನು ಪ್ರಮುಖ ಸ್ಥಾನಗಳಲ್ಲಿ ಕೂರಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು.
ಶ್ರೀಲಂಕಾ 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಕಂಡರಿಯದ ಆರ್ಥಿಕ ದುಸ್ಥಿತಿಗೆ ತಲುಪಿದೆ. ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು.
ಇದನ್ನೂ ಓದಿ: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಚೇತರಿಕೆ; ಗಂಗಾರಾಮ್ ಆಸ್ಪತ್ರೆಯಿಂದ ಬಿಡುಗಡೆ