ಕೊಲಂಬೋ: ಆಹಾರ, ವಿದ್ಯುತ್, ಔಷಧ ಕೊರತೆಯಿಂದ ನಲುಗಿರುವ ಶ್ರೀಲಂಕಾ ವಿದೇಶಗಳಿಗೆ ಮರು ಪಾವತಿಸಬೇಕಾದ ಸಾಲವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ, ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಇನ್ನಷ್ಟು ಸಾಲ ಪಡೆದುಕೊಳ್ಳುವುದೇ ಈಗಿನ ಬಿಕ್ಕಟ್ಟಿಗೆ ಪರ್ಯಾಯ ಮಾರ್ಗ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
1. ಅಗತ್ಯ ವಸ್ತುಗಳ ಆಮದಿಗೆ ಗಮನ: ಈಗಿರುವ ಪರಿಸ್ಥಿತಿಗೆ ಸಾಲ ಮರುಪಾವತಿ ಮಾಡುವುದು ಸವಾಲಿನ ಮತ್ತು ಅಸಾಧ್ಯವಾದ ಸ್ಥಿತಿಗೆ ದೇಶ ಬಂದು ನಿಂತಿದೆ. ಸಾಲ ಪಾವತಿಯ ಅವಧಿಯನ್ನು ವಿಸ್ತರಿಸುವುದೊಂದೇ ನಮ್ಮ ಮುಂದಿರುವ ಹಾದಿ. ಅಗತ್ಯ ವಸ್ತುಗಳ ಆಮದುಗಳ ಮೇಲೆ ಗಮನ ಕೇಂದ್ರೀಕರಿಸಬೇಕಾಗಿದೆ. ಬಾಹ್ಯ ಸಾಲವನ್ನು ಪೂರೈಸುವ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಪಿ.ನಂದಲಾಲ್ ವೀರಸಿಂಗ್ ಹೇಳಿಕೆ ನೀಡಿದ್ದಾರೆ.
2. $51 ಬಿಲಿಯನ್ ಡಾಲರ್ ಸಾಲ: ಶ್ರೀಲಂಕಾ ಮುಂದಿನ ವಾರ ಬಿಕ್ಕಟ್ಟಿನ ಕುರಿತಾಗಿ ಮತ್ತು ಸಾಲ ಪಡೆದುಕೊಳ್ಳಲು ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾತುಕತೆ ನಡೆಸಲಿರುವ ಮಧ್ಯೆಯೇ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಲಂಕಾ ನೆತ್ತಿಯ ಮೇಲೆ ಸುಮಾರು 51 ಬಿಲಿಯನ್ ಯುಎಸ್ ಡಾಲರ್ ಸಾಲವಿದೆ. ಅದರಲ್ಲಿ ಸುಮಾರು 4 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಜುಲೈನ ಅಂತ್ಯದ ವೇಳೆಗೆ ಪಾವತಿಸಬೇಕಿದೆ.
3. 'ಸದ್ಯ ಸಾಲ ಮರುಪಾವತಿ ಅಸಾಧ್ಯ': 1 ಬಿಲಿಯನ್ ಅಂತರರಾಷ್ಟ್ರೀಯ ಸಾವರಿನ್ ಬಾಂಡ್ಗಳು ಕೂಡ ಸಾಲದಲ್ಲಿ ಸೇರಿವೆ. 22 ಮಿಲಿಯನ್ ಜನರಿರುವ ಶ್ರೀಲಂಕಾ ತನ್ನ ಸಾಲ ಮರು ಪಾವತಿಯಲ್ಲಿ ಎಂದಿಗೂ ಸಮಯಮಿತಿ ದಾಟಿಲ್ಲ. ಈಗಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿದೇಶಗಳು ನೀಡಿದ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದೆ ಎಂದು ಅಧ್ಯಕ್ಷ ಗೋಟಬಯ ರಾಜಪಕ್ಸೆ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ರೋಪ್‌ವೇ ದುರಂತ : ಎರಡನೇ ದಿನದ ರಕ್ಷಣಾ ಕಾರ್ಯದಲ್ಲಿ ಮಹಿಳೆ ಸಾವು