ಕೊಲಂಬೊ (ಶ್ರೀಲಂಕಾ): ಆರ್ಥಿಕವಾಗಿ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ರಾಜಕೀಯ ವಾತಾವರಣವೂ ಪ್ರಕ್ಷುಬ್ಧಗೊಂಡಿದೆ. ಈ ನಡುವೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ ಪಕ್ಷ (ಎಸ್‌ಎಲ್‌ಪಿಪಿ) ಮಂಗಳವಾರ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ. ಸ್ವಪಕ್ಷ ಮತ್ತು ಮೈತ್ರಿ ಪಕ್ಷಗಳ 42 ಸಂಸದರು ಸ್ವತಂತ್ರವಾಗಿ ಕುಳಿತುಕೊಳ್ಳುವುದಾಗಿ ಘೋಷಿಸಿದ್ದಾರೆ.
225 ಸಂಸತ್ ಸ್ಥಾನಗಳಲ್ಲಿ ಎಸ್‌ಎಲ್‌ಪಿಪಿ ನೇತೃತ್ವದ ಮೈತ್ರಿಕೂಟ 2020ರ ಚುನಾವಣೆಯಲ್ಲಿ 146 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿತ್ತು. ಇದೀಗ 42 ಸಂಸದರು ತಟಸ್ಥವಾಗಿರುವುದಿಂದ ಅಲ್ಪಮತಕ್ಕೆ ಕುಸಿದಿದೆ. 42 ಜನ ಪೈಕಿ 14 ಮಂದಿ ಶ್ರೀಲಂಕಾ ಫ್ರೀಡಂ ಪಕ್ಷ ಮತ್ತು 12 ಜನ ಎಸ್‌ಎಲ್‌ಪಿಪಿ ಸಂಸದರಾಗಿದ್ದು, ಉಳಿದವರು ಮೈತ್ರಿಕೂಟದ ಸಂಸದರು ಸೇರಿದ್ದಾರೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ಪರಿಸ್ಥಿತಿ ತುಂಬಾ ಕೆಟ್ಟಿರುವ ಮಧ್ಯೆ ಈ ರಾಜಕೀಯ ಬೆಳವಣಿಗೆ ನಡೆದಿದೆ.
ಇತ್ತ, ಸೋಮವಾರ ರಾತ್ರಿಯಷ್ಟೇ ಅಧ್ಯಕ್ಷ ಗೋತಬಯ ರಾಜಪಕ್ಸೆ ನಾನು ರಾಜೀನಾಮೆ ಮಾತ್ರ ನೀಡುವುದಿಲ್ಲ. ಬೇಕಾದರೆ ಸಂಸತ್ತಿನಲ್ಲಿ 113 ಸ್ಥಾನಗಳನ್ನು ಹೊಂದಿರುವ ಯಾವುದೇ ಪಕ್ಷಕ್ಕೆ ಸರ್ಕಾರವನ್ನು ಹಸ್ತಾಂತರಿಸಲು ಸಿದ್ಧ ಎಂದು ಹೇಳಿದ್ದರು. ಅಲ್ಲದೇ, ಸಾರ್ವಜನಿಕರ ಹಿಂಸಾಚಾರದ ಮಧ್ಯೆ ರಾಜಪಕ್ಸೆ ಹಲವು ರಾಜಕೀಯ ಸಭೆಗಳನ್ನು ನಡೆಸಿದ್ದರು.
ಇದೀಗ ಆಡಳಿತಾರೂಢ ಸಂಸದರೇ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳಲು ನಿರ್ಧರಿಸಿರುವುದರಿಂದ ಸರ್ಕಾರ ಬಹುಮತ ಕಳೆದುಕೊಂಡಿದೆ. ಪ್ರತಿಪಕ್ಷಗಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸ್ವತಃ ಎಸ್‌ಎಲ್‌ಪಿಪಿ ಸಂಸದ ಹಾಗೂ ಮಾಜಿ ಸಚಿವ ನಿಮಲ್ ಲಾಂಜಾ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಬೀದಿಗಳಲ್ಲಿ ನಾಗರಿಕರ ಶವಗಳು ಪತ್ತೆ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ