ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವದ ಪ್ರಖ್ಯಾತ ಮ್ಯೂಸಿಕ್ ಸ್ಟ್ರೀಮಿಂಗ್ ಕಂಪನಿ ಸ್ಪಾಟಿಫೈ ವಿಶ್ವದಾದ್ಯಂತ ಹಲವಾರು ರಾಷ್ಟ್ರಗಳಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. "ನಮ್ಮ ಕಂಪನಿ ಆರಂಭವಾದಾಗಿನಿಂದ ನಮ್ಮ ಮಾರುಕಟ್ಟೆಯು ವಿಸ್ತಾರಗಳ್ಳುತ್ತಲೇ ಸಾಗಿದೆ. ನಮ್ಮ ಹೊಸತನ ಮುಂದುವರಿಸಲು ನಾವು ಪ್ರಪಂಚದಾದ್ಯಂತದ ಹಲವಾರು ಮಾರುಕಟ್ಟೆಗಳಲ್ಲಿ ನಮ್ಮ ಪ್ರೀಮಿಯಂ ಬೆಲೆಗಳನ್ನು ಬದಲಾಯಿಸುತ್ತಿದ್ದೇವೆ. ಈ ಬದಲಾವಣೆಗಳು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳು ಮತ್ತು ಕಲಾವಿದರಿಗೆ ಮೌಲ್ಯವನ್ನು ತಲುಪಿಸಲು ನಮಗೆ ಸಹಾಯ ಮಾಡುತ್ತದೆ ಎಂದು Spotify ಸೋಮವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಸ್ಪಾಟಿಫೈನ ಪ್ರೀಮಿಯಂ ಇಂಡಿವಿಜುವಲ್ ಯೋಜನೆಗೆ ಈಗ $10.99 ದರ ನಿಗದಿಪಡಿಸಲಾಗಿದೆ. ಈ ಮುನ್ನ ಇದು $9.99 ಆಗಿತ್ತು. ಪ್ರೀಮಿಯಂ ಡ್ಯುಯೊ ಯೋಜನೆಯ ದರ $12.99 ರಿಂದ $14.99 ಕ್ಕೆ ಹೆಚ್ಚಾಗಿದೆ. ಪ್ರೀಮಿಯಂ ಫ್ಯಾಮಿಲಿ ಪ್ಲಾನ್ ಈಗ $15.99 ರಿಂದ $16.99 ಕ್ಕೆ ಹೆಚ್ಚಾಗಿದೆ ಮತ್ತು ವಿದ್ಯಾರ್ಥಿ ಯೋಜನೆಯು $4.99 ರಿಂದ $5.99ಕ್ಕೆ ಹೆಚ್ಚಾಗಲಿದೆ. ಅಮೆರಿಕವನ್ನು ಹೊರತುಪಡಿಸಿ ಸ್ಪಾಟಿಫೈ ಕೆನಡಾ, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್, ಮೆಕ್ಸಿಕೋ ಮತ್ತು ಆಸ್ಟ್ರೇಲಿಯಾ ಸೇರಿದಂತೆ 53 ಇತರ ದೇಶಗಳಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಿದೆ.
ಇದಲ್ಲದೇ, ಅಸ್ತಿತ್ವದಲ್ಲಿರುವ ಚಂದಾದಾರರಿಗೆ ಇಮೇಲ್ ಮೂಲಕ ಬೆಲೆ ಬದಲಾವಣೆಗಳ ಬಗ್ಗೆ ತಿಳಿಸಲಾಗುವುದು ಮತ್ತು ಹೊಸ ಬೆಲೆಗಳು ಜಾರಿಗೆ ಬರುವ ಮೊದಲು ಒಂದು ತಿಂಗಳ ಗ್ರೇಸ್ ಅವಧಿ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಆ್ಯಪಲ್ ಮ್ಯೂಸಿಕ್ ತನ್ನ ಇಂಡಿವಿಜುವಲ್ ಚಂದಾದಾರಿಕೆ ಶುಲ್ಕವನ್ನು ತಿಂಗಳಿಗೆ $10.99 ಗೆ ಹೆಚ್ಚಿಸಿದೆ. ಫ್ಯಾಮಿಲಿ ಪ್ಲಾನ್ ದರ ತಿಂಗಳಿಗೆ $16.99 ಗೆ ಹೆಚ್ಚಾಗಿದೆ.
ಅಮೆಜಾನ್ ಮ್ಯೂಸಿಕ್ ಅನ್‌ಲಿಮಿಟೆಡ್ ಕೂಡ ನಾನ್ ಪ್ರೈಮ್ ಮೆಂಬರ್ಗಳಿಗೆ ತನ್ನ ಮಾಸಿಕ ದರವನ್ನು $10.99 ಗೆ ಹೆಚ್ಚಿಸಿದೆ. ಕಳೆದ ವಾರ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಹೊಸ ಮತ್ತು ಪ್ರಸ್ತುತ ಗ್ರಾಹಕರಿಗಾಗಿ US ನಲ್ಲಿ ಪ್ರೀಮಿಯಂ ವೈಯಕ್ತಿಕ ಯೋಜನೆಯ ಬೆಲೆಯನ್ನು $2 ರಷ್ಟು ಹೆಚ್ಚಿಸಿದೆ. ಬಳಕೆದಾರರು ಈಗ $11.99 ಬದಲಿಗೆ ತಿಂಗಳಿಗೆ $13.99 ಪಾವತಿಸಬೇಕಾಗುತ್ತದೆ. ಬಳಕೆದಾರರು iOS YouTube ಅಪ್ಲಿಕೇಶನ್‌ನಿಂದ ಚಂದಾದಾರರಾಗಿದ್ದರೆ $18.99 ದರ ಪಾವತಿಸಬೇಕಾಗುತ್ತದೆ.
ಸ್ಪಾಟಿಫೈ ಎಂಬುದು ಡಿಜಿಟಲ್ ಸಂಗೀತ ಸ್ಟ್ರೀಮಿಂಗ್ ಸೇವೆಯಾಗಿದ್ದು ಪ್ರಪಂಚದಾದ್ಯಂತದ ಕಲಾವಿದರಿಂದ ಲಕ್ಷಾಂತರ ಹಾಡುಗಳು, ಪಾಡ್‌ಕಾಸ್ಟ್‌ಗಳು ಮತ್ತು ವೀಡಿಯೊಗಳನ್ನು ಇದರಲ್ಲಿ ಕೇಳಬಹುದು. ನೀವು ಇಂಟರ್ನೆಟ್ ಸಂಪರ್ಕ ಹೊಂದಿದ್ದು, ಜಗತ್ತಿನ ಎಲ್ಲೇ ಇದ್ದರೂ ನೀವು ಸ್ಪಾಟಿಫೈನ ಬೃಹತ್ ಪ್ರಮಾಣದ ಆಡಿಯೋ ಮತ್ತು ವೀಡಿಯೊ ಕಂಟೆಂಟ್ ಅನ್ನು ಆನಂದಿಸಬಹುದು. ಆಫ್‌ಲೈನ್‌ನಲ್ಲಿ ಕೂಡ ಟ್ರ್ಯಾಕ್‌ಗಳು, ಆಲ್ಬಮ್‌ಗಳು ಮತ್ತು ಇತರ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಬಹುದು.
ಸ್ಪಾಟಿಫೈ ಅದ್ಭುತವಾದ ಮಲ್ಟಿ ಡಿವೈಸ್ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಫೋನ್, ಕಂಪ್ಯೂಟರ್, ಟಿವಿ, ಸ್ಮಾರ್ಟ್ ಸ್ಪೀಕರ್ ಮತ್ತು ಇತರ ಹಲವು ಸಾಧನಗಳಲ್ಲಿ ಸ್ಪಾಟಿಫೈನ ಕಂಟೆಂಟ್ ಅನ್ನು ಆಲಿಸಬಹುದು.
ಇದನ್ನೂ ಓದಿ : Google Update:ಸ್ವಯಂಚಾಲಿತವಾಗಿ ಲೈನ್ ನಂಬರ್ ಸೇರಿಸಲಿದೆ Google Docs