ಕಠ್ಮಂಡು (ನೇಪಾಳ): ನೆರೆ ರಾಷ್ಟ್ರ ನೇಪಾಳದಲ್ಲಿ ಗುರುವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಭಾರತದ ಆರು ಜನ ಯಾತ್ರಿಕರು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ರಾಜಸ್ಥಾನದ ನಿವಾಸಿಗಳೆಂದು ಗುರುತಿಸಲಾಗಿದೆ. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಮಾಧೇಶ್ ಪ್ರಾಂತ್ಯದ ಬಾರಾ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಬಸ್ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ರಾಜಸ್ಥಾನದಿಂದ ಯಾತ್ರಿಕರನ್ನು ಬಸ್ ಹೊತ್ತೊಯ್ಯುತ್ತಿತ್ತು. ಸಿಮಾರಾ ಉಪ ಮೆಟ್ರೋಪಾಲಿಟನ್ ನಗರದ ಚುರಿಯಾಮೈ ದೇವಸ್ಥಾನದ ಸಮೀಪದ ನದಿಯ ದಂಡೆಯಲ್ಲಿ ಬಸ್ ಬಿದ್ದಿದೆ ಎಂದು ವರದಿಯಾಗಿದೆ.
ಈ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಬಹದ್ದೂರ್ ಛೆಟ್ರಿ ಪ್ರತಿಕ್ರಿಯಿಸಿ, ''ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಯ ದಡದಲ್ಲಿ ಪಲ್ಟಿಯಾಗಿದೆ. ಬಸ್ನಲ್ಲಿ ಒಟ್ಟು 26 ಪ್ರಯಾಣಿಕರಿದ್ದರು. ಈ ಪೈಕಿ ಆರು ಮಂದಿ ಭಾರತೀಯರಲ್ಲದೆ ಒಬ್ಬ ನೇಪಾಳದ ಪ್ರಜೆಯೂ ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಕುರಿತು ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ'' ಎಂದು ಮಾಹಿತಿ ನೀಡಿದರು.
ಬಾರಾ ಜಿಲ್ಲಾ ಪೊಲೀಸ್ ಕಚೇರಿಯ ಮುಖ್ಯಸ್ಥರೂ ಆಗಿರುವ ಪೊಲೀಸ್ ಅಧೀಕ್ಷಕ ಹೋಬೀಂದ್ರ ಬೋಗತಿ ಮಾತನಾಡಿ, ''ಬಸ್ ಚಾಲಕ ಜಿಲಾಮಿ ಖಾನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಅಪಘಾತದಲ್ಲಿ ಇವರು ಗಾಯಗೊಂಡು ಚಿಕಿತ್ಸೆ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ಎಲ್ಲ ಗಾಯಾಳುಗಳು ಮಕ್ವಾನ್‌ಪುರ ಜಿಲ್ಲೆಯ ಹೆಟೌಡಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ'' ಎಂದರು.
ನೇಪಾಳದಲ್ಲಿ ಕಳಪೆ ರಸ್ತೆಗಳ ಕಾರಣ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಬುಧವಾರ ಸಹ ಬಾಗ್ಮತಿ ಪ್ರಾಂತ್ಯದ ಧಾಡಿಂಗ್ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್ ಮುಖ್ಯ ಹೆದ್ದಾರಿಯಿಂದ ಸ್ಕಿಡ್ ಆಗಿ ನದಿಗೆ ಉರುಳಿ ಬಿದ್ದಿತ್ತು. ಇದರಿಂದ ಕನಿಷ್ಠ ಎಂಟು ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡರು. ಕಠ್ಮಂಡುವಿನಿಂದ ಪೊಖರಾಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಾಶ್ಮೀರದಲ್ಲಿ ಮೂವರು ಸಾವು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಇಟ್ಟಿಗೆ ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಇಲ್ಲಿನ ದುಡು - ಬಂಸತಘರ್ ಪ್ರದೇಶದಲ್ಲಿ ಸಾಗುತ್ತಿದ್ದ ಟ್ರಕ್ ರಸ್ತೆಯಿಂದ ಉರುಳಿ ಪಕ್ಕದ ನದಿಗೆ ಬಂದಿದೆ. ಈ ಘಟನೆಯಲ್ಲಿ ಮತ್ತೊಬ್ಬರು ಸಹ ಗಾಯಗೊಂಡು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಪಿಟಿಐ)