ವಾವಯಂಡ (ಅಮೆರಿಕ): ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ ಬಸ್ವೊಂದು ನ್ಯೂಯಾರ್ಕ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ.
ನ್ಯೂಯಾರ್ಕ್ ನಗರದ ವಾಯುವ್ಯಕ್ಕೆ ಸುಮಾರು 45 ಮೈಲುಗಳಷ್ಟು ದೂರದಲ್ಲಿರುವ ವಾವಯಂಡಾ ಪಟ್ಟಣದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಸ್ಥಳೀಯ ಸುದ್ದಿವಾಹಿನಿಗಳ ಮಾಹಿತಿಯಂತೆ, ಬಸ್ ಲಾಂಗ್ ಐಲ್ಯಾಂಡ್‌ನಿಂದ ಪೆನ್ಸಿಲ್ವೇನಿಯಾದ ಬ್ಯಾಂಡ್ ಕ್ಯಾಂಪ್‌ಗೆ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ಸುಮಾರು 45 ಜನರು ಪ್ರಯಾಣಿಸುತ್ತಿದ್ದರು.
ಶಾಲೆಯಿಂದ ವಾರ್ಷಿಕ ಪ್ರವಾಸ ಕೈಗೊಳ್ಳಲಾಗಿತ್ತು. ಆರು ಬಸ್‌ಗಳ ಮೂಲಕ ಲಾಂಗ್ ಐಲ್ಯಾಂಡ್‌ನಿಂದ ಪೆನ್ಸಿಲ್ವೇನಿಯಾದ ಬ್ಯಾಂಡ್ ಕ್ಯಾಂಪ್‌ಗೆ ತೆರಳುತ್ತಿದ್ದರು. ಬಸ್ ತನ್ನ ಗಮ್ಯಸ್ಥಾನದಿಂದ ಸ್ವಲ್ಪ ದೂರದಲ್ಲಿದ್ದಾಗ ಅಪಘಾತಕ್ಕೀಡಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಗವರ್ನರ್ ಕ್ಯಾಥಿ ಹೊಚುಲ್, ಟಯರ್ ವೈಫಲ್ಯದ ಕಾರಣ ಬಸ್ ಹೆದ್ದಾರಿಯಿಂದ ಪಕ್ಕದ ಕೆಳಗಿನ ರಸ್ತೆಗೆ ಉರುಳಿದೆ. ಮೃತರನ್ನು ಶಾಲೆಯ ಬ್ಯಾಂಡ್ ಡೈರೆಕ್ಟರ್ ಮಸಾಪೆಕ್ವಾದ 43 ವರ್ಷದ ಗಿನಾ ಪೆಲ್ಲೆಟಿಯರ್ ಮತ್ತು ಫಾರ್ಮಿಂಗ್‌ಡೇಲ್‌ನ 77 ವರ್ಷದ ನಿವೃತ್ತ ಶಿಕ್ಷಕಿ ಬೀಟ್ರಿಸ್ ಫೆರಾರಿ ಎಂದು ಗುರುತಿಸಲಾಗಿದೆ. ಬಸ್‌ನಲ್ಲಿದ್ದ ಉಳಿದ ಪ್ರಯಾಣಿಕರ ಪೈಕಿ ಐವರು ಚಿಂತಾಜನಕ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಾವು ವಾರ್ಷಿಕ ಪ್ರವಾಸಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತು. ಸುದ್ದಿ ತಿಳಿದಾಕ್ಷಣ ಪೊಲೀಸರು, ಜಿಲ್ಲಾಡಳಿತ ಸಿಬ್ಬಂದಿ ರಕ್ಷಣಾ ಕಾರ್ಯಕ್ಕಾಗಿ ದೌಡಾಯಿಸಿದ್ದರು ಎಂದು ಫಾರ್ಮಿಂಗ್‌ಡೇಲ್ ಹೈಸ್ಕೂಲ್ ವಕ್ತಾರ ಜೇಕ್ ಮೆಂಡ್ಲಿಂಗರ್ ಮಾಹಿತಿ ನೀಡಿದರು.
ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿತ್ತು. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆ ರವಾನಿಸಿದ್ದಾರೆ. ಅಪಘಾತದ ಕೆಲವು ಗಂಟೆಗಳ ನಂತರ ಇತರ ಬಸ್‌ಗಳಲ್ಲಿ ಕೆಲವು ವಿದ್ಯಾರ್ಥಿಗಳನ್ನು ಲಾಂಗ್ ಐಲ್ಯಾಂಡ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ: ಕಠಿಣ ಹಿಜಾಬ್ ಮಸೂದೆಗೆ ಇರಾನ್ ಸಂಸತ್ತು ಅಂಗೀಕಾರ: ಸಾರ್ವಜನಿಕವಾಗಿ ಸ್ಕಾರ್ಫ್ ಧರಿಸದಿದ್ದರೆ 10 ವರ್ಷದವರೆಗೆ ಜೈಲು ಶಿಕ್ಷೆ