ಪೇಶಾವರ್ (ಪಾಕಿಸ್ತಾನ): ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಇಲಾಖೆ (ಸಿಟಿಡಿ) ತಂಡದ ಮೇಲೆ ಭಯೋತ್ಪಾದಕರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಭದ್ರತಾ ಸಿಬ್ಬಂದಿ ಮರು ದಾಳಿ ಮಾಡಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಏಳು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಯೋಜಿತವಾಗಿರುವ ಬಂಧಿತ ಉಗ್ರರನ್ನು ಖೈಬರ್ - ಪಖ್ತುಂಕ್ವಾ ಪ್ರಾಂತ್ಯದ ಬನ್ನು ಜಿಲ್ಲೆಗೆ ಭಯೋತ್ಪಾದನೆ ನಿಗ್ರಹ ಇಲಾಖೆಯ ಅಧಿಕಾರಿಗಳು ಸ್ಥಳಾಂತರಿಸುತ್ತಿದ್ದರು. ಈ ವೇಳೆ ಬಂಧಿತ ಕೈದಿಗಳನ್ನು ಬಿಡುಗಡೆ ಮಾಡುವ ಉದ್ದೇಶದೊಂದಿಗೆ ಈ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಪ್ರತಿದಾಳಿ ಮಾಡಿದರು. ಇದರಿಂದ ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗ ಜರುಗಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ಪೇಶಾವರ್ ಮಸೀದಿ ದಾಳಿಗೆ ಅಫ್ಘಾನಿಸ್ತಾನ್ ಕಾರಣವಲ್ಲ: ತಾಲಿಬಾನ್ ಸಚಿವ ಮುಟ್ಟಾಕಿ
ಪಾಕಿಸ್ತಾನದ ಭದ್ರತೆ ಪಡೆಗಳು ಮತ್ತು ಉಗ್ರರೊಂದಿಗೆ ಮಧ್ಯೆ ನಡೆದ ಈ ಗುಂಡಿನ ದಾಳಿಯಲ್ಲಿ ಮೂವರು ಕೈದಿಗಳು ಸೇರಿದಂತೆ ಏಳು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ ಇತರ ಉಗ್ರರು ಪರಾರಿಯಾಗಿದ್ದಾರೆ. ಹತರಾದ ಭಯೋತ್ಪಾದಕರು ಈ ಹಿಂದೆ ನಡೆದ ಭದ್ರತಾ ಪಡೆಗಳ ಮೇಲಿನ ದಾಳಿಗಳಲ್ಲಿ ಭಾಗಿಯಾಗಿದ್ದರು. ಬನ್ನು ಕಂಟೋನ್ಮೆಂಟ್ ಪೊಲೀಸರ ಮೇಲಿನ ದಾಳಿ ಮತ್ತು ಕಾನ್‌ಸ್ಟೆಬಲ್ ಹತ್ಯೆಗೈದ ಪ್ರಕರಣಗಳಲ್ಲಿ ಈ ಉಗ್ರರು ಬೇಕಾಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಾರಿಯಾಗಿರುವ ಉಗ್ರರನ್ನು ಸೆರೆ ಹಿಡಿಯುವ ಭಾರೀ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 2007ರಲ್ಲಿ ಹಲವಾರು ಉಗ್ರಗಾಮಿ ಸಂಘಟನೆಗಳ ಸೇರಿಕೊಂಡು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ನಂತರದಲ್ಲಿ ಫೆಡರಲ್ ಸರ್ಕಾರದೊಂದಿಗೆ ಈ ಸಂಘಟನೆಯು ಕದನ ವಿರಾಮ ಹಿಂತೆಗೆದುಕೊಂಡಿತ್ತು. ಅಲ್ಲದೇ, ದೇಶಾದ್ಯಂತ ಭಯೋತ್ಪಾದಕ ದಾಳಿಗಳನ್ನು ನಡೆಸಲು ತನ್ನ ಉಗ್ರಗಾಮಿಗಳಿಗೆ ಆದೇಶ ಕೊಟ್ಟಿತ್ತು.
ಅಲ್ಖೈದಾ ಸಂಘಟನೆಗೆ ನಿಕಟ: ಕಳೆದ ತಿಂಗಳ ಹಿಂದೆಯಷ್ಟೇ ಪೇಶಾವರದ ಮಸೀದಿಯೊಂದರ ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಮೃತರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯೇ ಸೇರಿದ್ದರು. ಈ ದಾಳಿಯ ಹಿಂದೆ ಇದೇ ಟಿಟಿಪಿ ಉಗ್ರ ಸಂಘಟನೆಯ ಕೈವಾಡವಿದೆ ಎಂದೂ ವರದಿಯಾಗಿತ್ತು. ಅಲ್ಲದೇ, ಟಿಟಿಪಿ ಉಗ್ರ ಸಂಘಟನೆಯು ಅಲ್ಖೈದಾ ಸಂಘಟನೆಗೆ ನಿಕಟವಾಗಿದೆ ಎಂದೇ ಹೇಳಲಾಗುತ್ತಿದೆ.
2009ರಲ್ಲಿ ಸೇನಾ ಪ್ರಧಾನ ಕಚೇರಿಯ ಮೇಲಿನ ದಾಳಿ, ಸೇನಾ ನೆಲೆಗಳ ಮೇಲಿನ ದಾಳಿ ಹಾಗೂ 2008ರಲ್ಲಿ ಇಸ್ಲಾಮಾಬಾದ್‌ನ ಮ್ಯಾರಿಯೆಟ್ ಹೋಟೆಲ್‌ನ ಬಾಂಬ್ ದಾಳಿ ಸೇರಿದಂತೆ ಪಾಕಿಸ್ತಾನದಾದ್ಯಂತ ಹಲವಾರು ಮಾರಣಾಂತಿಕ ದಾಳಿಗಳಲ್ಲೂ ಟಿಟಿಪಿ ಉಗ್ರ ಸಂಘಟನೆ ಭಾಗಿಯಾಗಿದೆ ಎನ್ನಲಾಗಿದೆ. 2014ರಲ್ಲಿ ಪಾಕಿಸ್ತಾನಿ ತಾಲಿಬಾನ್ ಸಂಘಟನೆಯು ಪೇಶಾವರ್‌ನಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್‌ಗೆ ನುಗ್ಗಿ 131 ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 150 ಜನರನ್ನು ಕೊಲೆ ಮಾಡಿತ್ತು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನತೆಗೆ ವಿದ್ಯುತ್ ಶಾಕ್: ಪ್ರತಿ ಯೂನಿಟ್ಗೆ ವಿಶೇಷ ಹೆಚ್ಚುವರಿ ಶುಲ್ಕ