ವಾಷಿಂಗ್ಟನ್ ಡಿ.ಸಿ: ಅಲಾಸ್ಕಾದಲ್ಲಿ ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಸಾರ್ವಜನಿಕ ಸುರಕ್ಷತಾ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಈ ದುರಂತ ಸಂಭವಿಸಿದ್ದು, ಸ್ಟರ್ಲಿಂಗ್ ಹೆದ್ದಾರಿಯ 91.5 ಮೈಲಿಯಲ್ಲಿ ಎರಡು ವಿಮಾನಗಳು ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ. ಒಂದು ವಿಮಾನದಲ್ಲಿ ಒಬ್ಬರು ಹಾಗೂ ಇನ್ನೊಂದು ವಿಮಾನದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಇಲಾಖೆ ಶುಕ್ರವಾರ ತಡರಾತ್ರಿ ದೃಢಪಡಿಸಿದೆ.
ಇನ್ನು ವಿಮಾನ ಅಪಘಾತದಲ್ಲಿ ಪ್ರಾದೇಶಿಕ ಶಾಸಕ ಗ್ಯಾರಿ ನಾಪ್ ಅವರು ಸಹ ಮೃತಪಟ್ಟಿದ್ದು, ರಿಪಬ್ಲಿಕನ್ ಸದಸ್ಯರಾಗಿದ್ದರು ಎಂದು ಸ್ಪೀಕರ್ ಬ್ರೈಸ್ ಎಡ್ಮನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ಪ್ರಾರಂಭಿಸಿದೆ.