ಇಸ್ಲಾಮಾಬಾದ್ : ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಚುನಾವಣೆ ನಡೆಸಲು ಅಗತ್ಯವಾದ ಹಣ ಬಿಡುಗಡೆ ಮಾಡಲು ವಿಫಲವಾದರೆ “ಗಂಭೀರ ಪರಿಣಾಮ” ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ಬುಧವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಾಷ್ಟ್ರೀಯ ಅಸೆಂಬ್ಲಿ ಹಾಗೂ ಸಿಂಧ್ ಮತ್ತು ಬಲೂಚಿಸ್ತಾನ್ ಅಸೆಂಬ್ಲಿಗಳ ಅವಧಿ ಮುಗಿದ ನಂತರ ಏಕಕಾಲದಲ್ಲಿ ಪಾಕಿಸ್ತಾನದಾದ್ಯಂತ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ರಕ್ಷಣಾ ಸಚಿವಾಲಯದ ಮನವಿಯನ್ನು ಆಲಿಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಇಜಾಜುಲ್ ಅಹ್ಸಾನ್ ಮತ್ತು ನ್ಯಾಯಮೂರ್ತಿ ಮುನಿಬ್ ಅಖ್ತರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಇದಕ್ಕೂ ಹಿಂದಿನ ದಿನ ರಕ್ಷಣಾ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮೇ 14 ರಂದು ಪಂಜಾಬ್ ಅಸೆಂಬ್ಲಿಗೆ ಚುನಾವಣೆ ನಡೆಸಬೇಕು ಎಂದು ನಿಗದಿಪಡಿಸಿದ ಏಪ್ರಿಲ್ 4 ರ ಆದೇಶವನ್ನು ಹಿಂಪಡೆಯಬೇಕು ಎಂದು ರಕ್ಷಣಾ ಸಚಿವಾಲಯ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತು.
ರಾಷ್ಟ್ರೀಯ ಮತ್ತು ಎಲ್ಲ ಪ್ರಾಂತೀಯ ಅಸೆಂಬ್ಲಿಗಳಿಗೆ ಸಾರ್ವತ್ರಿಕ ಚುನಾವಣೆಗಳನ್ನು ಒಂದೇ ದಿನಾಂಕದಂದು ನಡೆಸುವಂತೆ ನಿರ್ದೇಶನಗಳನ್ನು ನೀಡುವಂತೆ ಅದು ಸುಪ್ರೀಂಕೋರ್ಟ್‌ಗೆ ಕೇಳಿದೆ. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಲು 21 ಬಿಲಿಯನ್ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮತ್ತು ಇತರ ಇಲಾಖೆಗಳಿಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪರಿಪಾಲನೆಯ ಬಗೆಗಿನ ವರದಿಯನ್ನು ಸಹ ಅರ್ಜಿಯ ಜೊತೆಗೆ ಸಲ್ಲಿಸಲಾಯಿತು.
ದೇಶದಲ್ಲಿ ಭದ್ರತಾ ಪರಿಸ್ಥಿತಿಯು ಗಂಭಿರವಾಗಿರುವ ಕಾರಣದಿಂದ ಒಂದೇ ದಿನದಲ್ಲಿ ಚುನಾವಣೆ ನಡೆಸುವುದು ಅಗತ್ಯ ಮತ್ತು ಅಕ್ಟೋಬರ್ ಆರಂಭದ ವೇಳೆಗೆ ಸಶಸ್ತ್ರ ಪಡೆಗಳು ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚೀನಾ ಪ್ರಜೆಗೆ ಜೈಲುಶಿಕ್ಷೆ: ಧರ್ಮನಿಂದನೆಯ ಆರೋಪದ ಮೇಲೆ ಬಂಧಿತನಾಗಿರುವ ಚೀನಾದ ಪ್ರಜೆಯನ್ನು ಎರಡು ವಾರಗಳ ಕಾಲ ಜೈಲಿನಲ್ಲಿ ಇರಿಸುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ತೀರ್ಪು ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪೇಶಾವರದಲ್ಲಿ ಮಂಗಳವಾರ ತಿಳಿಸಿದ್ದಾರೆ. ಪಾಕಿಸ್ತಾನದ ವಿವಾದಾತ್ಮಕ ಧರ್ಮನಿಂದೆಯ ಕಾನೂನುಗಳ ಅಡಿ ಧರ್ಮನಿಂದನೆ ಮಾಡಿದ ಅಪರಾಧಿಗೆ ಮರಣದಂಡನೆ ಕೂಡ ವಿಧಿಸಬಹುದು.
ಟಿಯಾನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬನನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ವಾಯವ್ಯ ಪಾಕಿಸ್ತಾನದ ಕೋಮೆಲಾ ಎಂಬ ಪಟ್ಟಣದ ಬಳಿ ನಡೆದಿರುವ ಜಲಾಶಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಹಾಗೂ ಸ್ಥಳೀಯರು ಆತನನ್ನು ಬಂಧಿಸುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು. ಪಾಕಿಸ್ತಾನದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾದ ದಾಸು ಅಣೆಕಟ್ಟಿನಲ್ಲಿ ಕೆಲಸ ಮಾಡುವ ಚೀನಿ ಕಾರ್ಮಿಕರಲ್ಲೊಬ್ಬ. ಈ ಯೋಜನೆಯಲ್ಲಿ ಕೆಲಸ ಮಾಡುವ ಇಬ್ಬರು ಚಾಲಕರು ಕೆಲಸದ ಸಮಯದಲ್ಲಿ ಪ್ರಾರ್ಥನೆ ಮಾಡಲು ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದ ನಂತರ ಪಾಕಿಸ್ತಾನಿ ಕಾರ್ಮಿಕರು ಆತನ ವಿರುದ್ಧ ಧರ್ಮನಿಂದನೆಯ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ : ಚೀನಾದಲ್ಲಿ ತೀವ್ರ ಬಿಸಿಗಾಳಿ: ಜನಜೀವನ ಅಸ್ತವ್ಯಸ್ತ