ವಾಷಿಂಗ್ಟನ್(ಅಮೆರಿಕ): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮೊಮ್ಮಗಳು ನವೋಮಿ ಬೈಡನ್ ಅವರ ಭದ್ರತೆಯಲ್ಲಿ ಭಾರಿ ಲೋಪ ಉಂಟಾಗಿದೆ. ಮೂವರು ಅಪರಿಚಿತರು ನವೋಮಿಯ ಎಸ್‌ಯುವಿ ಕಾರಿನ ವಿಂಡೋ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ನವೋಮಿಯ ಭದ್ರತೆಗಾಗಿ ನಿಯೋಜಿಸಲಾದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ವರದಿಯ ಪ್ರಕಾರ, ಅಧ್ಯಕ್ಷ ಬೈಡನ್ ಅವರ ಮೊಮ್ಮಗಳು ನವೋಮಿ ಅವರ ಭದ್ರತೆಗಾಗಿ ರಹಸ್ಯ ಸೇವಾ ಏಜೆಂಟ್‌ಗಳನ್ನು ನಿಯೋಜಿಸಲಾಗಿದೆ. ನವೋಮಿ ತನ್ನ ಭದ್ರತೆಯೊಂದಿಗೆ ಜಾರ್ಜ್‌ಟೌನ್‌ನಲ್ಲಿದ್ದರು. ಅವರ SUV ಕಾರನ್ನು ಅಲ್ಲಿ ನಿಲ್ಲಿಸಲಾಗಿತ್ತು. ಆ ಸ್ಥಳದಲ್ಲಿ ಕೆಲವರು ಅವರ SUV ಯ ವಿಂಡೋವನ್ನು ಒಡೆಯಲು ಪ್ರಯತ್ನಿಸಿದ್ದಾರೆ. ನಂತರ ಅವರ ಭದ್ರತಾ ಸಿಬ್ಬಂದಿ ಗುಂಡು ಹಾರಿಸಲು ಪ್ರಾರಂಭಿಸಿದರು. ಗುಂಡಿನ ಸದ್ದ ಕೇಳುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಬೇಕಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನವೋಮಿ ತನ್ನ ಗೆಳೆಯನನ್ನು ಮದುವೆಯಾದರು. 29 ವರ್ಷದ ನವೋಮಿ ಅಧ್ಯಕ್ಷ ಬೈಡನ್ ಅವರ ಮಗ ಹಂಟರ್ ಬೈಡನ್ ಮತ್ತು ಕ್ಯಾಥ್ಲೀನ್ ಅವರ ಹಿರಿಯ ಮಗಳು. ನವೋಮಿ ವೃತ್ತಿಯಲ್ಲಿ ವಕೀಲೆ. ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ ಜೋ ಬೈಡನ್ ಅವರ ಮಗಳ ಹೆಸರನ್ನು ನವೋಮಿಗೆ ಇಡಲಾಗಿದೆ. ನವೋಮಿ ವಾಷಿಂಗ್ಟನ್ DC ಯಲ್ಲಿ ಬೆಳೆದರು. ನವೋಮಿ ತನ್ನ ಅಜ್ಜ ಜೋ ಬೈಡನ್ ಅವರನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವರನ್ನು ಪ್ರೀತಿಯಿಂದ 'ಪಾಪ್ಸ್' ಎಂದು ಕರೆಯುತ್ತಾರೆ.
ಬೈಡನ್ ಕುಟುಂಬಕ್ಕೆ ಸೇರಿಕೊಂಡ ಶ್ವಾನ: ಕೆಲವು ವರ್ಷಗಳ ಹಿಂದೆ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಕುಟುಂಬಕ್ಕೆ ಹೊಸ ಶ್ವಾನವೊಂದು ಸೇರಿಕೊಂಡಿತು. ಬೈಡನ್ ಈ ವಿಷಯವನ್ನು ಟ್ವಿಟರ್‌ನಲ್ಲಿ ಹೇಳಿದ್ದರು. ಈ ಜರ್ಮನ್ ಶೆಫರ್ಡ್‌ಗೆ 'ಕಮಾಂಡರ್' ಎಂದು ಹೆಸರಿಡಲಾಗಿದೆ. ಬೈಡನ್ ಕಮಾಂಡರ್‌ನ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಹಂಚಿಕೊಂಡ ವಿಡಿಯೋದಲ್ಲಿ ಕಮಾಂಡರ್, ಶ್ವೇತಭವನಕ್ಕೆ ಸ್ವಾಗತ ಎಂದು ಬೈಡನ್ ಬರೆದುಕೊಂಡಿದ್ದರು. ಇನ್ನು ಕಮಾಂಡರ್ ಅನ್ನು ಅಧ್ಯಕ್ಷರಿಗೆ ಸಹೋದರ ಜೇಮ್ಸ್ ಬೈಡನ್ ಉಡುಗೊರೆಯಾಗಿ ನೀಡಿದ್ದರು. ಕಮಾಂಡರ್ಗೂ ಮೊದಲು ಬೈಡನ್ ಅವರ ಕುಟುಂಬದಲ್ಲಿ ಎರಡು ಶ್ವಾನಗಳಿದ್ದವು. 'ಚಾಂಪ್' ಎಂಬ ಶ್ವಾನ ಕೆಲವು ವರ್ಷಗಳ ಹಿಂದೆ ನಿಧನವಾಯಿತು. ಮತ್ತೊಂದು ಶ್ವಾನ ‘ಮೇಜರ್’ ಅನ್ನು ದುರ್ವರ್ತನೆಯಿಂದಾಗಿ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಓದಿ: ಬ್ರಿಟನ್ನ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ನೇಮಕ