ದುಬೈ: ಸೌದಿ ಅರೇಬಿಯಾ ಸರ್ಕಾರವನ್ನು ಟೀಕಿಸಿ 7 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ಗಾಗಿ ಈಗ ಅಮೆರಿಕದ ಪ್ರಜೆಗೆ ಸೌದಿ ಸರ್ಕಾರ 16 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದು ವಾಕ್ ಸ್ವಾತಂತ್ರ್ಯದ ಹರಣವಾಗಿದೆ ಎಂದು ಬಂಧಿತನ ಪುತ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಅಮೆರಿಕ ಸರ್ಕಾರಕ್ಕೆ ದೂರು ನೀಡಲಾಗಿದೆ.
ಅಮೆರಿಕದ ಫ್ಲೋರಿಡಾದ ನಿವಾಸಿಯಾದ 72 ವರ್ಷದ ನಿವೃತ್ತ ಪ್ರಾಜೆಕ್ಟ್ ಮ್ಯಾನೇಜರ್ ಆದ ಸಾದ್ ಇಬ್ರಾಹಿಂ ಅಲ್ಮಾಡಿ ಎಂಬುವರು ಸೌದಿಗೆ ಕಳೆದ ತಿಂಗಳು ಭೇಟಿ ನೀಡಿದಾಗ ಅಲ್ಲಿನ ಸರ್ಕಾರ ಬಂಧಿಸಿತ್ತು. ಬಳಿಕ ವಿಚಾರಣೆಯ ನೆಪದಲ್ಲಿ ಜೈಲಿಗೆ ಹಾಕಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
7 ವರ್ಷಗಳ ಹಿಂದೆ ಇಬ್ರಾಹಿಂ ಅಲ್ಮಾಡಿ ಅವರು ಸೌದಿ ಅರೇಬಿಯಾದ ನಿರಂಕುಶ ನೀತಿ ಮತ್ತು ಭ್ರಷ್ಟಾಚಾರವನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಕಳೆದ ತಿಂಗಳು ಕುಟುಂಬಸ್ಥರ ಭೇಟಿ ಮಾಡಲು ಸೌದಿಗೆ ತೆರಳಿದಾಗ ಬಂಧಿಸಲಾಗಿದೆ. ಅಮೆರಿಕದಲ್ಲಿದ್ದಾಗ ನನ್ನ ತಂದೆ ಸೌದಿ ಸರ್ಕಾರವನ್ನು ಟೀಕಿಸಿದ್ದರು. ಸೌದಿ ಸರ್ಕಾರದ ಈ ನಡೆ ವಾಕ್ ಸ್ವಾತಂತ್ರ್ಯದ ಹರಣ ಮಾಡಿದಂತೆ ಎಂದು ಬಂಧಿತನ ಪುತ್ರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರವನ್ನು ಟೀಕಿಸಿ ಪೋಸ್ಟ್ ಮಾಡಿದ್ದಕ್ಕೆ ಸೌದಿಗಳು ದೀರ್ಘಾವಧಿಯ ಜೈಲು ಶಿಕ್ಷೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸರ್ಕಾರ ಇಂತಹದ್ದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗೆ ಸರ್ಕಾರ ಟೀಕಿಸಿ ಪೋಸ್ಟ್ ಮಾಡಿದ್ದ ಮಹಿಳೆಗೆ ಅಲ್ಲಿನ ಕೋರ್ಟ್ 45 ವರ್ಷ ಶಿಕ್ಷೆ ವಿಧಿಸಿದೆ.
ಮತ್ತೊಂದು ಪ್ರಕರಣದಲ್ಲಿ ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಮಾಡುತ್ತಿರುವ ಸೌದಿ ವಿದ್ಯಾರ್ಥಿ ವಿಪಕ್ಷ ನಾಯಕರ ಟ್ವೀಟ್ಗಳನ್ನು ಮರು ಟ್ವೀಟ್ ಮಾಡಿದ್ದಕ್ಕೆ 34 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಓದಿ: ಜಯಲಲಿತಾ ಸಾವಿನ ವರದಿ.. ನನ್ನ ವಿರುದ್ಧದ ಆರೋಪ ಸುಳ್ಳು, ತನಿಖೆಗೆ ಸಿದ್ಧ: ಶಶಿಕಲಾ