ದುಬೈ: ಸೌದಿ ಅರೇಬಿಯಾದ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಭಿನ್ನಮತೀಯರು ಮತ್ತು ಕಾರ್ಯಕರ್ತರನ್ನು ಫಾಲೋ ಮಾಡಿ, ಅವರ ಟ್ವೀಟ್ಗಳನ್ನು ಮರು ಟ್ವೀಟ್ ಮಾಡಿದ್ದಕ್ಕಾಗಿ 34 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಇಬ್ಬರು ಮಕ್ಕಳ ತಾಯಿ ಮತ್ತು ಬ್ರಿಟನ್ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿರುವ ಸಲ್ಮಾ ಅಲ್ ಶೆಹಾಬ್ ಶಿಕ್ಷೆಗೆ ಗುರಿಯಾದ ಡಾಕ್ಟರೇಟ್ ವಿದ್ಯಾರ್ಥಿ. ರಜೆಯ ಸಮಯದಲ್ಲಿ ಯುನೈಟೆಡ್ ಕಿಂಗ್ಡಮ್ನಿಂದ ಸೌದಿ ಅರೇಬಿಯಾಕ್ಕೆ ಮರಳಿದಾಗ ಜನವರಿ 15, 2021 ರಂದು ಶೆಹಾಬ್ ಅವರನ್ನು ಬಂಧಿಸಲಾಗಿದೆ. ವಿಶೇಷ ಭಯೋತ್ಪಾದಕ ನ್ಯಾಯಾಲಯವು ಆರಂಭದಲ್ಲಿ ಸಲ್ಮಾ ಅಲ್ - ಶೆಹಾಬ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
ಸಾರ್ವಜನಿಕ ಅಶಾಂತಿಯನ್ನು ಉಂಟು ಮಾಡಲು ಮತ್ತು ನಾಗರಿಕ ಮತ್ತು ರಾಷ್ಟ್ರೀಯ ಭದ್ರತೆಯನ್ನು ಅಸ್ಥಿರಗೊಳಿಸಲು ಶೆಹಾಬ್ ಸಾಮಾಜಿಕ ಮಾಧ್ಯಮ ಬಳಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಸೋಮವಾರ ಮೇಲ್ಮನವಿ ನ್ಯಾಯಾಲಯವು ಮತ್ತೆ ಶಿಕ್ಷೆಯನ್ನು ಹೆಚ್ಚಿಸಿದೆ. 34 ವರ್ಷಗಳ ಜೈಲು ಶಿಕ್ಷೆ ಮತ್ತು 34 ವರ್ಷಗಳ ಪ್ರಯಾಣ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಮಾನವ ಹಕ್ಕು ಸಂಘಟನೆಗಳು ಖಂಡಿಸಿದ್ದು, ಶೆಹಾಬ್ ಬಿಡುಗಡೆಗೆ ಒತ್ತಾಯಿಸಿವೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋದ ಟ್ವಿಟರ್