ನ್ಯೂಯಾರ್ಕ್: ಚಾಕು ಇರಿತಕ್ಕೆ ಒಳಗಾದ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇರಿತದಿಂದಾಗಿ ಒಂದು ಕಣ್ಣಿಗೆ ತೀವ್ರ ಹಾನಿಯಾಗಿದ್ದು, ದೃಷ್ಟಿ ಕಳೆದುಹೋಗುವ ಸಾಧ್ಯತೆ ಇದೆ. ಯಕೃತ್ತಿಗೂ ಚಾಕು ಇರಿದು ಹಾನಿಗೀಡಾಗಿದೆ. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ.
ವಿವಾದಾತ್ಮಕ ಬರವಣಿಗೆಗಳ ಮೂಲಕ ಒಂದು ದಶಕಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದ ಸಲ್ಮಾನ್ ರಶ್ದಿ ಅವರು ನಿನ್ನೆ ನ್ಯೂಯಾರ್ಕ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಉಪನ್ಯಾಸ ನೀಡುತ್ತಿದ್ದಾಗ ನ್ಯೂಜೆರ್ಸಿಯ ಫೇರ್ವ್ಯೂನ ಹದಿ ಮತರ್(24) ಎಂಬಾತ ಚಾಕುವಿನಿಂದ ಸತತವಾಗಿ ಇರಿದಿದ್ದಾನೆ.
12- 14 ಕಡೆ ರಶ್ದಿ ದೇಹಕ್ಕೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಕಣ್ಣು, ಯಕೃತ್ತು ಭಾಗಕ್ಕೆ ಗಂಭೀರ ಗಾಯವಾಗಿದೆ. ಇದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈವರೆಗೂ ಅವರು ಮಾತನಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಲೇಖಕ ರಶ್ದಿ ಅವರ ಮೇಲಾದ ದಾಳಿಗೆ ಸಾಹಿತ್ಯಲೋಕ ಭೀತಿಗೊಂಡಿದೆ. ಸಾಹಿತ್ಯದ ಮೂಲಕ ಅಭಿಪ್ರಾಯ ಹಂಚಿಕೊಳ್ಳುವದನ್ನೇ ವಿರೋಧಿಸಿ ಹತ್ಯೆ ಯತ್ನ ಮಾಡಿದ್ದಕ್ಕೆ ಸಾಹಿತಿಗಳು ಕಿಡಿಕಾರಿದ್ದಾರೆ.
"ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿ ಭಯಾನಕವಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ. ದಾಳಿ ಬಳಿಕ ತಕ್ಷಣಕ್ಕೆ ಸ್ಪಂದಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಜನರಿಗೆ ಕೃತಜ್ಞರಾಗಿರುತ್ತೇವೆ ಎಂದು ಯುಎಸ್ ಅಧ್ಯಕ್ಷರ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಓದಿ: ನ್ಯೂಯಾರ್ಕ್ನಲ್ಲಿ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ