ಮಾಸ್ಕೋ,ರಷ್ಯಾ: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವಾಗಲೇ ರಷ್ಯಾ ಸೇನೆಗೆ ಸಂಕಷ್ಟ ಎದುರಾಗಿದೆ. ಭಾರಿ ಮದ್ದುಗುಂಡುಗಳ ಸ್ಫೋಟದ ನಂತರ ಹಾನಿಯಾಗಿದ್ದ ರಷ್ಯಾದ ಮೋಸ್ಕ್ವಾ ಯುದ್ಧನೌಕೆ ಕಪ್ಪು ಸಮುದ್ರದಲ್ಲಿ ಮುಳುಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. ಮೊದಲಿಗೆ ಮದ್ದುಗುಂಡುಗಳು ಸ್ಫೋಟಗೊಂಡಿದ್ದ ಕಾರಣ ನೌಕೆಗೆ ಸಾಕಷ್ಟು ಹಾನಿಯಾಗಿತ್ತು. ನಂತರ ಅದನ್ನು ಬಂದರಿಗೆ ಎಳೆತರುವ ಪ್ರಯತ್ನ ನಡೆದಿತ್ತು. ಆದರೆ ಚಂಡಮಾರುತದ ಕಾರಣ ಅದನ್ನು ಎಳೆ ತರಲಾಗಲಿಲ್ಲ ಎಂದು ರಷ್ಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುದ್ಧನೌಕೆಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯ ಕಾರಣದಿಂದ ಅದರಲ್ಲಿದ್ದ ಮದ್ದುಗುಂಡುಗಳು ಸ್ಫೋಟಗೊಂಡಿದ್ದವು ಎಂದು ತಿಳಿದುಬಂದಿದೆ. ಆದರೆ ಕಪ್ಪು ಸಮುದ್ರದಲ್ಲಿರುವ ನೌಕಾನೆಲೆಗೆ ಅದನ್ನು ತರಲು ಸಾಧ್ಯವಾಗಲಿಲ್ಲ ಎಂದು ಟಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ, ಅಗ್ನಿ ಅವಘಡಕ್ಕೆ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಮೊದಲಿಗೆ ಮೋಸ್ಕ್ವಾ ಯುದ್ಧನೌಕೆಯನ್ನು 'ಸ್ಲಾವಾ' ಎಂದು ಕರೆಯಲಾಗುತ್ತಿದ್ದು, ಸೋವಿಯತ್ ಯೂನಿಯನ್ನ ಉಕ್ರೇನ್ ನಗರವಾದ ಮೈಕೋಲೇವ್ನಲ್ಲಿ ಇಡಲಾಗಿತ್ತು. ನಂತರ 1986ರಲ್ಲಿ ರಷ್ಯಾ ಸೇನೆ ನಿಯೋಜನೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೆಗಿ ಚಂಡಮಾರುತ: ಫಿಲಿಪೈನ್ಸ್ನಲ್ಲಿ ಈವರೆಗೆ 121 ಮಂದಿ ಸಾವು