ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರೆದಿದೆ. ಈ ಬೆನ್ನಲ್ಲೇ ರಷ್ಯಾದ ಬಿಲಿಯನೇರ್ ರೋಮನ್ ಅಬ್ರಮೊವಿಚ್ ಮತ್ತು ಉಕ್ರೇನಿಯನ್ ಸಮಾಲೋಚಕರ ಮೇಲೆ ವಿಷ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ರಷ್ಯಾದ ಕೆಲವರು ಶಾಂತಿ ಮಾತುಕತೆಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ವರದಿ ಮಾಡಿದೆ.
ಉಕ್ರೇನ್‌ನ ರಾಜಧಾನಿಯಲ್ಲಿ ನಡೆದ ಸಭೆಯ ನಂತರ, ಅಬ್ರಮೊವಿಚ್ ಮತ್ತು ಕನಿಷ್ಠ ಇಬ್ಬರು ಉಕ್ರೇನಿಯನ್ ಸಮಾಲೋಚಕರ ಕಣ್ಣುಗಳು ಕೆಂಪಾಗಿವೆ. ಮುಖ ಮತ್ತು ಕೈಗಳ ಮೇಲಿನ ಚರ್ಮ ಕಿತ್ತು ಬಂದಿದೆ. ಇದರ ಜೊತೆಗೆ ಹಲವಾರು ರೋಗ ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಅಬ್ರಮೊವಿಚ್ ಮತ್ತು ಇತರ ಸಮಾಲೋಚಕರ ಆರೋಗ್ಯ ಪರಿಸ್ಥಿತಿ ಈಗ ಸುಧಾರಿಸಿದ್ದು, ಅವರ ಜೀವಕ್ಕೆ ಏನೂ ಅಪಾಯ ಇಲ್ಲ ಎಂದು ತಿಳಿದು ಬಂದಿದೆ.
ಈ ಘಟನೆಯ ತನಿಖೆ ನಡೆಸಿದ ತನಿಖಾಧಿಕಾರಿ ಬೆಲ್ಲಿಂಗ್ಕ್ಯಾಟ್ ಕ್ರಿಸ್ಟೋ ಗ್ರೋಜೆವ್ ' ಈ ವಿಷದಾಳಿ ಯಾರನ್ನೂ ಕೊಲ್ಲುವ ಉದ್ದೇಶ ಹೊಂದಿಲ್ಲ. ಕೇವಲ ಎಚ್ಚರಿಕೆಯಾಗಿದೆ' ಎಂದಿದ್ದಾರೆ. 2020ರಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರ ಏಜೆಂಟ್ಗಳು ರಷ್ಯಾದ ವಿಪಕ್ಷದ ನಾಯಕ ಅಲೆಕ್ಸಿ ನವಲ್ಸಿ ಅವರ ಮೇಲೆಯೂ ವಿಷ ದಾಳಿ ನಡೆಸಿದ್ದರು ಎಂಬುದನ್ನು ಆಧರಿಸಿ ಗ್ರೋಜೇವ್ ತನಿಖೆ ನಡೆಸಿದ್ದು, ಅಬ್ರಮೋವಿಚ್ ಮೇಲಿನ ದಾಳಿಯನ್ನೂ ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವ ರೀತಿಯ ವಿಷವನ್ನು ಪ್ರಯೋಗಿಸಲಾಗಿದೆ ಎಂದು ಪತ್ತೆ ಹಚ್ಚಲು ಫಾರೆನ್ಸಿಕ್ ತಜ್ಞರು ಯಾವುದೇ ಮಾದರಿ ಸಂಗ್ರಹಿಸಲಿಲ್ಲ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಇಂಡೋ- ಪೆಸಿಫಿಕ್ ನೀತಿ ಘೋಷಿಸಿದ ಬೈಡನ್: ಬಜೆಟ್ನಲ್ಲಿ 1.8 ಬಿಲಿಯನ್ ಅನುದಾನ ಘೋಷಣೆ... ಏಕೆ ಗೊತ್ತಾ?