ಡಮಾಸ್ಕಸ್ (ಸಿರಿಯಾ) : ಸಿರಿಯಾದ ಬಂಡುಕೋರರ ನಿಯಂತ್ರಣದಲ್ಲಿರುವ ವಾಯುವ್ಯ ಇದ್ಲಿಬ್ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ಗಳು ಭಾನುವಾರ ಬಾಂಬ್ ದಾಳಿ ನಡೆಸಿವೆ. ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
"ಇದ್ಲಿಬ್‌ನ ಜಿಸ್ರ್ ಅಲ್-ಶುಘೂರ್ ನಗರದಲ್ಲಿ ನಡೆದ ವೈಮಾನಿಕ ದಾಳಿಯಿಂದ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಹಾನಿಗೊಳಗಾಗಿದೆ. ಮುಸ್ಲಿಂ ಹಬ್ಬವಾದ ಈದ್ ಅಲ್-ಅಧಾಗೆ ಮುಂಚಿತವಾಗಿ ಈ ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿ ವೈಮಾನಿಕ ದಾಳಿಯು ಎರಡನೇ ದಿನ ಸಹ ಮುಂದುವರೆದಿದ್ದು, ಕಳೆದ ನಾಲ್ಕು ದಿನಗಳಿಂದ ಫಿರಂಗಿ ಹಾಗೂ ಗುಂಡಿನ ದಾಳಿ ಸಹ ನಡೆಸಲಾಗುತ್ತಿದೆ" ಎಂದು ನಾಗರಿಕ ರಕ್ಷಣಾ ವಿಭಾಗ ಮಾಹಿತಿ ನೀಡಿದೆ.
ಇದನ್ನೂ ಓದಿ : ದಿನಸಿ ಖರೀದಿಗೆ ಕ್ಯೂನಲ್ಲಿ ನಿಂತಾಗ ರಷ್ಯಾ ಶೆಲ್ ದಾಳಿ: ಖಾರ್ಕಿವ್‌ನಲ್ಲಿ ಹಾವೇರಿಯ ವಿದ್ಯಾರ್ಥಿ ಸಾವು
ಇನ್ನೊಂದೆಡೆ, ಭಾನುವಾರ ಜಿಸ್ರ್ ಅಲ್-ಶುಘೂರ್ ಮೇಲಿನ ವೈಮಾನಿಕ ದಾಳಿಯು ಇದುವರೆಗೆ ವಾಯುವ್ಯ ಸಿರಿಯಾದಲ್ಲಿ 2023 ರಲ್ಲಿ ಸಂಭವಿಸಿದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ರಷ್ಯಾ ವೈಮಾನಿಕ ದಾಳಿ ಬಗ್ಗೆ ಸ್ಥಳೀಯ ಪತ್ರಕರ್ತನೊಬ್ಬ ಮಾತನಾಡಿದ್ದು, ದಾಳಿ ನಡೆದು ಮೂವತ್ತು ನಿಮಿಷಗಳ ನಂತರ ನಾನು ಸ್ಥಳಕ್ಕೆ ಹೋದೆ, ನೆಲ ರಕ್ತ ಸಿಕ್ತವಾಗಿರುವುದನ್ನು ಕಂಡೆ, ಮಾರುಕಟ್ಟೆಯಲ್ಲಿ ಟೊಮೇಟೊ ಚಲ್ಲಾಪಿಲ್ಲಿಯಾಗಿರುವುದನ್ನು ನೋಡಿದೆ ಎಂದು ಹೇಳಿದ್ದಾರೆ.
ರಷ್ಯಾ ಆಕ್ರಮಣದ ಬಗ್ಗೆ ಅಮೆರಿಕ ಕಳವಳ: ಅಂತಾರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದು ನೀಡಿದ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಮೇಲೆ ರಷ್ಯಾದ ಮಿಲಿಟರಿ ವಿಮಾನಗಳು ಗಮನಾರ್ಹ ಆಕ್ರಮಣಶೀಲತೆಯನ್ನು ತೋರಿಸಿವೆ. ಏಪ್ರಿಲ್‌ನಲ್ಲಿ ರಷ್ಯಾದ ಪೈಲಟ್‌ಗಳು ಸಿರಿಯಾದ ಮೇಲೆ ಯುಎಸ್ ಜೆಟ್‌ಗಳನ್ನು "ಡಾಗ್‌ಫೈಟ್" (ಆಕಾಶದಲ್ಲಿ ಯುದ್ಧ ವಿಮಾನಗಳ ಮಧ್ಯೆ ನಡೆಯುವ ಕಾದಾಟ) ಮಾಡಲು ಪ್ರಯತ್ನಿಸಿದ್ದವು ಎಂದು ಅಮೆರಿಕ ಹೇಳಿದೆ. ಹಾಗೆಯೇ, ಈ ತಿಂಗಳ ಆರಂಭದಲ್ಲಿ ರಷ್ಯಾದ ವಿಮಾನಗಳ ಅಸುರಕ್ಷಿತ ನಡವಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ, ಮಧ್ಯಪ್ರಾಚ್ಯಕ್ಕೆ F-22 ಫೈಟರ್ ಜೆಟ್‌ಗಳನ್ನು ನಿಯೋಜಿಸಿದೆ.
ಮತ್ತೊಂದೆಡೆ ರಷ್ಯಾ ಉಕ್ರೇನ್ ಮೇಲಿನ ತನ್ನ ಆಕ್ರಮಣವನ್ನೂ ನಿಲ್ಲಿಸಿಲ್ಲ. ಇನ್ನೊಂದು ಕಡೆ ರಷ್ಯಾದಲ್ಲಿ ಉಂಟಾದ ಆಂತರಿಕ ದಂಗೆ ಕೂಡಾ ತಣ್ಣಗೆ ಆಗಿದೆ.
ಇದನ್ನೂ ಓದಿ : ಹೆರಿಗೆ & ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ.. ಕಟ್ಟಡದ ಅವಶೇಷಗಳಡಿ ಮಕ್ಕಳು ಸಿಲುಕಿರುವ ಶಂಕೆ!
ವೈಮಾನಿಕ ಬಾಂಬ್ ದಾಳಿ: ಕಳೆದ ಏಪ್ರಿಲ್ ತಿಂಗಳಲ್ಲಿ ಮ್ಯಾನ್ಮಾರ್ ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಅಲ್ಲಿನ ಸೇನೆ ವೈಮಾನಿಕ ಬಾಂಬ್ ದಾಳಿ ನಡೆಸಿತ್ತು. ಈ ಭೀಕರ ದುರಂತದಲ್ಲಿ ಮಕ್ಕಳು ಸೇರಿದಂತೆ 100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ದೇಶದ 2ನೇ ದೊಡ್ಡ ನಗರವಾದ ಮ್ಯಾಂಡಲೆಯ ಉತ್ತರಕ್ಕಿರುವ 100 ಕಿ.ಮೀ ದೂರದಲ್ಲಿನ ಸಾಗಯಿಂಗ್ ಪ್ರದೇಶದಲ್ಲಿ ಸೇನೆ ವಿರುದ್ಧ ಚಳವಳಿ ನಡೆಸಲಾಗುತ್ತಿತ್ತು. ಇದನ್ನೇ ಗುರಿಯಾಗಿಸಿಕೊಂಡು ಸೇನಾಪಡೆ ವೈಮಾನಿಕ ದಾಳಿ ನಡೆಸಿವೆ. ಮೃತರಲ್ಲಿ ಕೆಲವರು ಹೋರಾಟಗಾರರಾಗಿದ್ದರು.