ಮಾಸ್ಕೋ( ರಷ್ಯಾ): ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸಬೇಕೆಂದು ರಷ್ಯಾ ಬಯಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮಾತುಕತೆ ಮೂಲಕ ಎಲ್ಲ ಸಶಸ್ತ್ರ ಸಂಘರ್ಷಗಳು ಕೊನೆಗೊಳ್ಳುತ್ತವೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ ಎಂದು ವರದಿಯಾಗಿದೆ.
ನಮ್ಮ ಗುರಿ ಮಿಲಿಟರಿ ಸಂಘರ್ಷದ ಫ್ಲೈವೀಲ್ ಅನ್ನು ತಿರುಗಿಸುವುದು ಅಲ್ಲವೇ ಅಲ್ಲ, ಬದಲಾಗಿ ಈ ಯುದ್ಧವನ್ನು ಕೊನೆಗೊಳಿಸುವುದಾಗಿದೆ. ನಾವು ಇದಕ್ಕಾಗಿ ಶ್ರಮಿಸುತ್ತಿದ್ದೇವೆ ಮತ್ತು ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂದು ಪುಟಿನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಶ್ವೇತಭವನಕ್ಕೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿ ನೀಡಿದ ಒಂದು ದಿನದ ಬಳಿಕ ಪುಟಿನ್ ಅವರ ಈ ಹೇಳಿಕೆ ಹೊರ ಬಿದ್ದಿದೆ.
ಮಾತುಕತೆಗಳಿಗೆ ರಷ್ಯಾ ಮುಕ್ತವಾಗಿದೆ ಎಂದು ರಷ್ಯಾ ಪದೇ ಪದೆ ಹೇಳಿದೆ. ಆದರೆ ಉಕ್ರೇನ್ ಮತ್ತು ಅಮೆರಿಕ ಈ ಬಗ್ಗೆ ತೀವ್ರವಾದ ಸಂದೇಹವನ್ನು ಹೊಂದಿದೆ. ಈ 10 ತಿಂಗಳ ಅವಧಿಯಲ್ಲಿ ಅವರು ಕಾಲಾವಕಾಶವನ್ನು ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ಪುಟಿನ್ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತುಕತೆಗೆ ಉಕ್ರೇನ್ ಸಿದ್ಧ ಇಲ್ಲ ಎಂದು ರಷ್ಯಾ ಆರೋಪಿಸಿದೆ.
ರಾಜತಾಂತ್ರಿಕ ಮಾರ್ಗದ ಮಾತುಕತೆಯ ಮೂಲಕ ಎಲ್ಲಾ ಸಶಸ್ತ್ರ ಸಂಘರ್ಷಗಳು ಕೊನೆಗೊಳ್ಳುತ್ತವೆ ಎಂದು ಪುಟಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಘರ್ಷದ ಸ್ಥಿತಿಯಲ್ಲಿರುವ ಯಾವುದೇ ಬಣಗಳು ಮಾತುಕತೆ ನಡೆಸಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರಲೇಬೇಕಾಗುತ್ತದೆ. ನಮ್ಮನ್ನು ವಿರೋಧಿಸುವವರಿಗೆ ಈ ಅರಿವು ಎಷ್ಟು ಬೇಗ ಬರುತ್ತದೆಯೋ ಅಷ್ಟು ಒಳ್ಳೆಯದು. ನಾವು ಇದನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಎಂದೂ ಪುಟಿನ್ ಇದೇ ವೇಳೆ ತಿಳಿಸಿದ್ದಾರೆ.
ಇದನ್ನು ಓದಿ: ತವಾಂಗ್ ಸಂಘರ್ಷ; ಭಾರತ - ಚೀನಾ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಅಡ್ಡಿ