ಮಾಸ್ಕೊ (ರಷ್ಯಾ): ರಷ್ಯಾವು ಕ್ಲಸ್ಟರ್ ಬಾಂಬ್‌ಗಳ ಸಾಕಷ್ಟು ದಾಸ್ತಾನು ಹೊಂದಿದ್ದು, ಅಗತ್ಯ ಬಿದ್ದಲ್ಲಿ ಅವನ್ನು ಉಕ್ರೇನ್ ವಿರುದ್ಧ ಬಳಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. "ಕ್ಲಸ್ಟರ್ ಬಾಂಬ್‌ಗಳ ಬಳಕೆಯನ್ನು ಯುದ್ಧಾಪರಾಧ ಎಂದು ನಾನು ಪರಿಗಣಿಸುತ್ತೇನೆ. ಆದರೆ ರಷ್ಯಾ ಪಡೆಗಳ ವಿರುದ್ಧ ಪ್ರಯೋಗಿಸಲು ಉಕ್ರೇನ್ ಕ್ಲಸ್ಟರ್ ಬಾಂಬ್‌ಗಳನ್ನು ನಿಯೋಜಿಸಿದೆ" ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕವು ತನಗೆ ಕ್ಲಸ್ಟರ್ ಬಾಂಬ್‌ಗಳನ್ನು ನೀಡಿದೆ ಎಂದು ಉಕ್ರೇನ್ ಗುರುವಾರ ಹೇಳಿದ್ದು ಗಮನಾರ್ಹ. ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧ ಮುಂದುವರಿದಿರುವ ಸಮಯದಲ್ಲಿ ಅಮೆರಿಕವು ಉಕ್ರೇನ್ಗೆ ದೊಡ್ಡ ಪ್ರಮಾಣದಲ್ಲಿ ಯುದ್ಧ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ರಷ್ಯಾದ ದಾಳಿ ಎದುರಿಸಲು ಕೀವ್ಗೆ ಶಸ್ತ್ರಾಸ್ತ್ರಗಳನ್ನು ನೀಡುವುದು ಅಗತ್ಯವಾಗಿದೆ ಎಂದು ಅಮೆರಿಕದ ವಾದವಾಗಿದೆ.
ದೊಡ್ಡ ಸಂಖ್ಯೆಯಲ್ಲಿ ಏಕಕಾಲಕ್ಕೆ ಸಣ್ಣ ಬಾಂಬ್‌ಗಳನ್ನು ಬಿಡುಗಡೆ ಮಾಡುವ ಕ್ಲಸ್ಟರ್ ಬಾಂಬ್‌ಗಳನ್ನು 100 ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದೆ. ಇವು ವಿಶಾಲ ಪ್ರದೇಶದಲ್ಲಿ ಭಾರಿ ಹಾನಿಯುಂಟು ಮಾಡಬಲ್ಲವು. ಇದರಲ್ಲಿ ಕೆಲ ಬಾಂಬ್ಗಳು ಸ್ಫೋಟಗೊಳ್ಳದೆ ದಶಕಗಳವರೆಗೆ ಭೂಮಿಯ ಮೇಲೆ ಉಳಿಯಬಹುದು ಹಾಗೂ ವಿಶೇಷವಾಗಿ ಮಕ್ಕಳಿಗೆ ಅಪಾಯವನ್ನುಂಟು ಮಾಡಬಹುದು.
ತನ್ನ ಸ್ವಂತ ಪ್ರದೇಶವನ್ನು ಹಿಂಪಡೆಯುವ ಪ್ರಯತ್ನದಲ್ಲಿ ರಷ್ಯಾ ಸೈನಿಕರ ಸಾಂದ್ರತೆಯನ್ನು ಚದುರಿಲಸು ತಾನು ಕ್ಲಸ್ಟರ್ ಬಾಂಬ್‌ಗಳನ್ನು ಬಳಸಬಹುದು. ಆದರೆ ಅವುಗಳನ್ನು ರಷ್ಯಾದ ಭೂಪ್ರದೇಶದಲ್ಲಿ ಬಳಸುವುದಿಲ್ಲ ಎಂದು ಉಕ್ರೇನ್ ಹೇಳಿದೆ. ಈ ಬಗ್ಗೆ ಟಿವಿ ಮಾಸ್ಕೊ ಚಾನೆಲ್ ಮೂಲಕ ಮಾತನಾಡಿದ ಪುಟಿನ್, ಅದೇ ಮಾದರಿಯಲ್ಲಿ ನಾವೂ ಪ್ರತಿಕ್ರಿಯೆ ನೀಡುತ್ತೇವೆ ಎಂದರು.
"ರಷ್ಯಾ ಸರ್ಕಾರದ ಬಳಿ ವಿವಿಧ ರೀತಿಯ ಕ್ಲಸ್ಟರ್ ಬಾಂಬ್‌ಗಳ ಸಾಕಷ್ಟು ಸಂಗ್ರಹವಿದೆ ಎಂಬುದನ್ನು ಗಮನಕ್ಕೆ ತರಲು ಬಯಸುತ್ತೇನೆ. ನಾವು ಅವುಗಳನ್ನು ಇನ್ನೂ ಬಳಸಿಲ್ಲ. ಆದರೆ ನಮ್ಮ ವಿರುದ್ಧ ಬಳಸಿದರೆ, ಅದೇ ರೀತಿಯ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ." ಎಂದು ಪುಟಿನ್ ತಿಳಿಸಿದರು.
ಕ್ಲಸ್ಟರ್ ಬಾಂಬ್‌ಗಳ ಬಳಕೆಯನ್ನು ಅಪರಾಧವೆಂದು ತಾನು ಪರಿಗಣಿಸುವುದಾಗಿ ಮತ್ತು ರಷ್ಯಾವು ಈ ಹಿಂದೆ ತನ್ನದೇ ಆದ ಯುದ್ಧಸಾಮಗ್ರಿ ಸಮಸ್ಯೆಗಳನ್ನು ಅನುಭವಿಸಿದ್ದರೂ ಸಹ ಅವುಗಳನ್ನು ಬಳಸುವ ಅಗತ್ಯ ಬಂದಿಲ್ಲ ಎಂದು ಹೇಳಿದರು. ಮಾಸ್ಕೋ ಮತ್ತು ಉಕ್ರೇನ್ ಎರಡೂ ಕ್ಲಸ್ಟರ್ ಬಾಂಬ್‌ಗಳನ್ನು ಬಳಸಿವೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ. ರಷ್ಯಾ, ಉಕ್ರೇನ್ ಮತ್ತು ಯುಎಸ್ ಕ್ಲಸ್ಟರ್ ಯುದ್ಧಸಾಮಗ್ರಿಗಳ ನಿರ್ಬಂಧ ಒಪ್ಪಂದಕ್ಕೆ ಈವರೆಗೂ ಸಹಿ ಹಾಕಿಲ್ಲ.
ಫೆಬ್ರವರಿ 24, 2022 ರಂದು ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭಿಸಿತು. ಯುದ್ಧದ ಮೊದಲ ದಿನಗಳಲ್ಲಿ ರಷ್ಯಾದ ಪಡೆಗಳು ಗಮನಾರ್ಹ ಮುನ್ನಡೆ ಸಾಧಿಸಿದರ, ಉಕ್ರೇನಿಯನ್ ಸೈನಿಕರು ಕೀವ್ ಮತ್ತು ಇತರ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನಗಳನ್ನು ತಡೆದರು ಮತ್ತು ಶೀಘ್ರದಲ್ಲೇ ರಷ್ಯಾದ ವಿರುದ್ಧ ಪ್ರತಿದಾಳಿಗಳನ್ನು ಪ್ರಾರಂಭಿಸಿದರು.
ಇದನ್ನೂ ಓದಿ : LGBTQ rights: ಲಿಂಗ ಪರಿವರ್ತನೆಗೆ ನಿಷೇಧ; ರಷ್ಯಾದಲ್ಲಿ ಟ್ರಾನ್ಸ್ಜೆಂಡರ್ ವಿರುದ್ಧ ಕಠಿಣ ಕಾನೂನು