ಮಾಸ್ಕೋ (ರಷ್ಯಾ): ರಷ್ಯಾ ಯುದ್ಧ ಆರಂಭಿಸಿ 15 ತಿಂಗಳ ಬಳಿಕ ಉಕ್ರೇನ್ ಪ್ರತ್ಯುತ್ತರ ನೀಡುತ್ತಿದೆ. ರಷ್ಯಾ ಆಕ್ರಮಿಸಿದ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯಲು ದಾಳಿಗೆ ಮುಂದಾಗಿದೆ. ಅಂತೆಯೇ ರಷ್ಯಾದ ಗಡಿಯಲ್ಲಿ ಬುಧವಾರ ಭಾರಿ ಗುಂಡಿನ ದಾಳಿ ನಡೆದಿದೆ. ಡ್ರೋನ್ ಅಪ್ಪಳಿಸಿದ ಪರಿಣಾಮ ತೈಲ ಸಂಸ್ಕರಣಾ ಘಟಕ ಹೊತ್ತಿ ಉರಿದಿದೆ. ಈ ದಾಳಿಗಳಿಗೆ ಉಕ್ರೇನ್ ಕಾರಣವೆಂದು ರಷ್ಯಾ ಆರೋಪಿಸಿದೆ. ಆದ್ರೆ ಉಕ್ರೇನ್ ಯಾವುದೇ ಹೇಳಿಕೆ ನೀಡಿಲ್ಲ.
ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದ ಗಡಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಅಪಾರ್ಟ್‌ಮೆಂಟ್ ಕಟ್ಟಡಗಳು, ನಾಲ್ಕು ಮನೆಗಳು, ಒಂದು ಶಾಲೆ ಮತ್ತು ಎರಡು ಆಡಳಿತಾತ್ಮಕ ಕಟ್ಟಡಗಳಿಗೆ ಹಾನಿಯಾಗಿದೆ. ಇದರಿಂದಾಗಿ ಸ್ಥಳದಲ್ಲಿ ಹಿಂಸಾಚಾರ ಉಂಟಾಗಿದೆ. ಇದಕ್ಕೆಲ್ಲ ಉಕ್ರೇನ್ ಸೇನೆಯೇ ಕಾರಣ ಎಂದು ಬೆಲ್ಗೊರೊಡ್ ಪ್ರಾಂತ್ಯದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಗಂಭೀರ ಆರೋಪ ಮಾಡಿದ್ದಾರೆ.
ಶೆಬೆಕಿನೊ ನಗರದಲ್ಲಿ ಶೆಲ್ ದಾಳಿ ನಡೆಯುತ್ತಿದ್ದು ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿನ ಕೈಗಾರಿಕೆಯೊಂದರಲ್ಲಿ ಬೆಂಕಿ ಕೂಡ ಕಾಣಿಸಿಕೊಂಡಿತ್ತು. ಮಂಗಳವಾರ ತಾತ್ಕಾಲಿಕ ವಸತಿ ಕೇಂದ್ರದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಗವರ್ನರ್ ಗ್ಲಾಡ್ಕೋವ್ ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಕ್ರಿಮಿಯಾದ ಆಕ್ರಮಿತ ಪ್ರದೇಶದ ಪೂರ್ವದಲ್ಲಿರುವ ಕ್ರಾಸ್ನೋಡರ್ ಪ್ರಾಂತ್ಯದಲ್ಲಿನ ತೈಲ ಸಂಸ್ಕರಣಾಗಾರಕ್ಕೆ ಡ್ರೋನ್ ಅಪ್ಪಳಿಸಿತ್ತು. ಇದರಿಂದ ತೈಲ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ ಮಾಡುತ್ತಿದೆ ಎಂದು ರಷ್ಯಾ ಆರೋಪಿಸಿದ ಮರುದಿನವೇ ಈ ಘಟನೆಗಳು ಸಂಭವಿಸಿವೆ.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಮೇಲೆ ಅಮೆರಿಕದಿಂದ ಮತ್ತಷ್ಟು ಹೊಸ ನಿರ್ಬಂಧ
ರಷ್ಯಾ ರಾಜಧಾನಿಯಿಂದ ಉಡಾವಣೆಗೊಂಡ ಎಲ್ಲ ಎಂಟು ಮಾನವರಹಿತ ವೈಮಾನಿಕ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಡ್ರೋನ್ ದಾಳಿ ಅಥವಾ ಬೆಲ್ಗೊರೊಡ್ ಮತ್ತು ಕ್ರಾಸ್ನೋಡರ್‌ನಲ್ಲಿ ಬುಧವಾರ ನಡೆದ ಘಟನೆಗಳ ಬಗ್ಗೆ ಉಕ್ರೇನ್ ಇನ್ನೂ ಪ್ರತಿಕ್ರಿಯಿಸಿಲ್ಲ. ಸಾಮಾನ್ಯವಾಗಿ, ಉಕ್ರೇನ್ ಸರ್ಕಾರವು ರಷ್ಯಾ ಮೇಲಿನ ದಾಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ರಷ್ಯಾ ಯುದ್ಧ ಸಾರಿದ 15 ತಿಂಗಳ ಬಳಿಕ ಉಕ್ರೇನ್ ಪ್ರತ್ಯುತ್ತರ ನೀಡುವ ಮೂಲಕ ತಮ್ಮ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯುತ್ತಿದೆ.
ಕಳೆದ ತಿಂಗಳಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸ 'ಕ್ರೆಮ್ಲಿನ್' ಮೇಲೆ ದಾಳಿ ನಡೆದಿತ್ತು. ಪುಟಿನ್ ಹತ್ಯೆಗೆ ಉಕ್ರೇನ್ ನಡೆಸಿದ ಸಂಚು ಎಂದು ರಷ್ಯಾ ಗಂಭೀರ ಆರೋಪ ಮಾಡಿತ್ತು. ಆದ್ರೆ ಈ ಆರೋಪವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಲ್ಲಗಳೆದಿದ್ದರು. "ನಾವು ಪುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡುವುದಿಲ್ಲ. ಆಕ್ರಮಿಸಿಕೊಂಡಿರುವ ನಮ್ಮ ಭೂಪ್ರದೇಶದಲ್ಲಿ ಹೋರಾಡುತ್ತೇವೆ. ನಮ್ಮ ಹಳ್ಳಿ ಮತ್ತು ನಗರಗಳನ್ನು ರಕ್ಷಿಸಿಕೊಳ್ಳುತ್ತೇವೆ" ಎಂದು ಇತ್ತೀಚೆಗೆ ಫಿನ್‌ಲ್ಯಾಂಡ್‌ನಲ್ಲಿ ಝೆಲೆನ್ಸ್ಕಿಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ರಷ್ಯಾ ವಿರುದ್ಧ ಯುದ್ಧ: ಉಕ್ರೇನ್‌ಗೆ ಕ್ರೂಸ್ ಕ್ಷಿಪಣಿ ಪೂರೈಸಿದ ಬ್ರಿಟನ್