ಕೀವ್(ಉಕ್ರೇನ್): ಉಕ್ರೇನ್ ಮೇಲೆ ನಿರಂತರ ದಾಳಿ ಮುಂದುವರಿಸಿರುವ ರಷ್ಯಾ ನಿನ್ನೆಯಿಂದ ಖೆರ್ಸನ್ ಪ್ರದೇಶದ ಮೇಲೆ 54 ಬಾರಿ ಶೆಲ್ ದಾಳಿ ಮಾಡಿದೆ. ಇದು ನಾಗರಿಕರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಮಗು ಸೇರಿದಂತೆ ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಖೆರ್ಸನ್ ಒಬ್ಲಾಸ್ಟ್ ಗವರ್ನರ್, 2 ದಿನಗಳ ಅಂತರದಲ್ಲಿ 54 ಶೆಲ್ ದಾಳಿ ನಡೆಸಿದೆ. ಇದರಿಂದ ಅಪಾರ್ಟ್ಮೆಂಟ್ಗಳ ಕಟ್ಟಡಗಳು, ಶಿಪ್ಯಾರ್ಡ್, ಶಾಲೆ, ಮೈದಾನ, ಗ್ಯಾಸ್ಪೈಪ್ಗಳು ಭಾರೀ ಹಾನಿಗೊಳಗಾಗಿವೆ. ದಾಳಿಕೋರ ರಷ್ಯಾ ಉದ್ದೇಶಪೂರ್ವಕವಾಗಿ ನಾಗರಿಕರನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಖೆರ್ಸನ್‌ನಲ್ಲಿ ವಸತಿ ಕಟ್ಟಡಗಳು, ಗ್ಯಾರೇಜ್ ಮತ್ತು ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಎಂಟು ಹಳ್ಳಿಗಳು ಬೆಂಕಿಗೆ ಆಹುತಿಯಾಗಿವೆ. ರಷ್ಯನ್ನರು ಭಯೋತ್ಪಾದಕ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು. ಉಕ್ರೇನ್ನ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡು ಬಳಿಕ ಅವುಗಳಿಂದ ಕಾಲ್ಕಿತ್ತ ಬಳಿಕ ಖೆರ್ಸನ್ ಒಬ್ಲಾಸ್ಟ್ ಪ್ರದೇಶದ ಮೇಲೆ ಶೆಲ್ ದಾಳಿ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮತ್ತೆ ವಲಸೆ ಶುರು: ಅನೇಕ ನಿವಾಸಿಗಳು ರಷ್ಯಾದ ಶೆಲ್ ದಾಳಿಯಿಂದ ಪಾರಾಗಲು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಬೇರೆಡೆ ವಲಸೆ ಆರಂಭವಾಗಿದೆ. ನವೆಂಬರ್ 20- 25 ರ ನಡುವೆ ರಾಜಧಾನಿ ಕೀವ್ ಮೇಲೆ ನಡೆದ ಶೆಲ್ ದಾಳಿಯಲ್ಲಿ 15 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಒಂದು ಮಗು ಸೇರಿದಂತೆ 35 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ.