ವಾಷಿಂಗ್ಟನ್(ಅಮೆರಿಕ): ರಷ್ಯಾ ಮತ್ತು ಅಮೆರಿಕ ನಡುವೆ ನಡೆದ ಇಬ್ಬರು ಕೈದಿಗಳ ವಿನಿಮಯ ಜಗತ್ತಿನ ಗಮನ ಸೆಳೆದಿದೆ. ರಷ್ಯಾ ದೇಶವು ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ್ತಿ ಬ್ರಿಟ್ನಿ ಗ್ರೈನರ್ ಅವರನ್ನು ಬಿಡುಗಡೆ ಮಾಡಿದ್ದು, ಅಮೆರಿಕದಿಂದ ಮರ್ಚೆಂಟ್ ಆಫ್ ಡೆತ್ ಅರ್ಥಾತ್ ಮೃತ್ಯು ವ್ಯಾಪಾರಿ ಎಂದೇ ಕರೆಯಲ್ಪಡುವ ಶಸ್ತ್ರಾಸ್ತ್ರ ವ್ಯಾಪಾರಿ ವಿಕ್ಟರ್ ಬೌಟ್ ಎಂಬಾತನನ್ನು ರಷ್ಯಾ ಪಡೆದಿದೆ.
ಕಳೆದ ಫೆಬ್ರವರಿಯಲ್ಲಿ ಮಾದಕ ವಸ್ತು ಆರೋಪದಡಿ ಅಮೆರಿಕದ ಬಾಸ್ಕೆಟ್‌ಬಾಲ್ ತಾರೆ, ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಬ್ರಿಟ್ನಿ ಗ್ರೈನರ್ ಅವರನ್ನು ರಷ್ಯಾ ಬಂಧಿಸಿತ್ತು. ಮಾಸ್ಕೋ ವಿಮಾನ ನಿಲ್ದಾಣದಲ್ಲಿದ್ದಾಗ ಬ್ರಿಟ್ನಿ ಗ್ರೈನರ್ ಲಗೇಜ್‌ನಲ್ಲಿ ಹ್ಯಾಶಿಶ್ ಅನಿಲ ತುಂಬಿದ್ದ ವೇಪ್ ಕಾರ್ಟ್ರಿಡ್ಜ್ ಪತ್ತೆಯಾಗಿದ್ದವು. ಇದರಿಂದಾಗಿ ಇವರನ್ನು ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ರಷ್ಯಾ ಹೇಳಿತ್ತು. ಅಲ್ಲದೇ, ಬ್ರಿಟ್ನಿ ಗ್ರೈನರ್ಗೆ ಒಂಬತ್ತು ವರ್ಷಗಳ ಶಿಕ್ಷೆಯ ಜೊತೆಗೆ 1 ಮಿಲಿಯನ್ ರೂಬಲ್ಸ್ (16,500 ಅಮೆರಿಕ ಡಾಲರ್) ದಂಡ ವಿಧಿಸಲಾಯಿತು.
ಇದನ್ನು ಓದಿ: ಪರಮಾಣು ದಾಳಿ.. ಪಾಶ್ಮಿಮಾತ್ಯ ರಾಷ್ಟ್ರಗಳ ಆರೋಪ ತಳ್ಳಿ ಹಾಕಿದ ಪುಟಿನ್
ರಷ್ಯಾದಲ್ಲಿ ಬ್ರಿಟ್ನಿ ಗ್ರೈನರ್ ಬಂಧನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ರಷ್ಯಾ ವ್ಲಾಡಿಮಿರ್ ಪುಟಿನ್ ಬಾಸ್ಕೆಟ್‌ಬಾಲ್ ತಾರೆಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಒಂದೇ ವಾರದಲ್ಲಿ ಉಕ್ರೇನ್ ಮತ್ತು ರಷ್ಯಾ ಯುದ್ಧ ಶುರುವಾಗಿದೆ. ಆದ್ದರಿಂದ ಬ್ರಿಟ್ನಿ ಗ್ರೈನರ್ ಅಂತಾರಾಷ್ಟ್ರೀಯ ನಿರ್ಬಂಧಗಳ ವ್ಯಾಪ್ತಿಗೆ ಒಳಗಾಗಿದ್ದರು.
ಇದೀಗ ಖೈದಿಗಳ ವಿನಿಮಯದಲ್ಲಿ ಬ್ರಿಟ್ನಿ ಗ್ರೈನರ್ರನ್ನು ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾದಲ್ಲಿ ಅನ್ಯಾಯವಾಗಿ ಬಂಧಿಸಲ್ಪಟ್ಟ ತಿಂಗಳುಗಳ ಬ್ರಿಟ್ನಿ ಗ್ರೈನರ್ ಶೀಘ್ರವೇ ಪ್ರೀತಿಪಾತ್ರರನ್ನು ಸೇರಿಸಿಕೊಳ್ಳುತ್ತಾರೆ. ನಾನು ಬ್ರಿಟ್ನಿ ಗ್ರೈನರ್ ಅವರೊಂದಿಗೆ ಮಾತನಾಡಿದ್ದು, ಅವರು ಸುರಕ್ಷಿತವಾಗಿದ್ದಾರೆ. ವಿಮಾನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.
ರಷ್ಯಾ ಪಡೆದಿರುವ ವಿಕ್ಟರ್ ಬೌಟ್ ಯಾರು?: ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಬ್ರಿಟ್ನಿ ಗ್ರೈನರ್ ಬಿಡುಗಡೆಗೆ ಪ್ರತಿಯಾಗಿ ರಷ್ಯಾ ಪಡೆದಿರುವ ವಿಕ್ಟರ್ ಬೌಟ್ಗೆ ದೊಡ್ಡ ಇತಿಹಾಸ ಹಾಗೂ ಹಿನ್ನೆಲೆಯೇ ಇದೆ. ಈತನೊಬ್ಬ ರಷ್ಯಾದ ಶಸ್ತ್ರಾಸ್ತ್ರ ವ್ಯಾಪಾರಿ. ಪ್ರಚಂಚದ ಅನೇಕ ಸಂಘಟನೆಗಳಿಗೆ ಆಯುಧಗಳ ಪೂರೈಕೆದಾರ. ಈತ ಸಾಕಷ್ಟು ಸ್ವಂತ ವಿಮಾನಗಳನ್ನು ಹೊಂದಿದ್ದಾನೆ. 2008ರಲ್ಲಿ ಬಂಧನವಾಗಿದ್ದ ಬ್ರಿಟ್ನಿ ಗ್ರೈನರ್ ಬಗ್ಗೆ 2005ರಲ್ಲೇ ಹಾಲಿವುಡ್ನಲ್ಲಿ ಸಿನಿಮಾ ಕೂಡ ಬಂದಿತ್ತು.
55 ವರ್ಷದ ಈ ವಿಕ್ಟರ್ ಬೌಟ್ ಈ ಹಿಂದೆ ಸೋವಿಯತ್ ಸೈನ್ಯದಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಹಲವು ವಿದೇಶಿ ಭಾಷೆಗಳನ್ನು ಅಧ್ಯಯನ ಮಾಡಿದ್ದ. ಸೋವಿಯತ್ ಒಕ್ಕೂಟದ ಪತನದ ನಂತರ ಅಂತಾರಾಷ್ಟ್ರೀಯ ಸರಕು ಸಾಗಣೆದಾರನಾಗಿ ಬದಲಾದ. ಅಲ್ಲಿಂದ ತನ್ನದೇ ಆದ ಸಾಮ್ರಾಜ್ಯವನ್ನು ಈತ ಕಟ್ಟಿಕೊಂಡಿದ್ದ.
ಇದನ್ನೂ ಓದಿ: ಇನ್ನಷ್ಟು ಡ್ರೋನ್, ಕ್ಷಿಪಣಿ ಪೂರೈಕೆಗೆ ಇರಾನ್‌ನತ್ತ ದೃಷ್ಟಿ ನೆಟ್ಟ ರಷ್ಯಾ: ಅಮೆರಿಕ ಕಳವಳ
ಶಸ್ತ್ರಾಸ್ತ್ರ ವ್ಯಾಪಾರಿಯಾಗಿ ಉಕ್ರೇನ್ ಮತ್ತು ಪ್ರಪಂಚದ ಇತರ ಭಾಗಗಳಿಂದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ. ಪ್ರಪಂಚದಾದ್ಯಂತದ ಭಯೋತ್ಪಾದಕ ಮತ್ತು ಬಂಡಾಯ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಿ, ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾಕ್, ಸುಡಾನ್, ಅಂಗೋಲಾ, ಕಾಂಗೋ, ಲೈಬೀರಿಯಾ, ಫಿಲಿಪೈನ್ಸ್, ರುವಾಂಡಾ, ಸಿಯೆರಾ ಲಿಯೋನ್ನಂತಹ ರಾಷ್ಟ್ರಗಳಲ್ಲಿ ತನ್ನ ಜಾಲ ಹರಡಿದ್ದ.
ಸಾಕಷ್ಟು ಸಂಖ್ಯೆಯ ವಿಮಾನಗಳನ್ನು ಹೊಂದಿರುವ ವಿಕ್ಟರ್ ಬೌಟ್ ಬಳಿ ಆಂಟಿನೋವ್, ಇಲ್ಯೂಷನ್ ಮತ್ತು ಯಾಕೋವ್ಲೆವ್ ಮಾದರಿಯ ಕಾರ್ಗೋ ವಿಮಾನಗಳಿವೆ. ಇವುಗಳನ್ನು ಬಳಸಿ ವಿವಿಧ ಯುದ್ಧಭೂಮಿಗಳಿಗೆ ಶಸ್ತ್ರಾಸ್ತ್ರಗಳನ್ನು ಸ್ಥಳಾಂತರಿಸುತ್ತಿದ್ದ. ಅಮೆರಿಕದಲ್ಲಿ ಅವಳಿ ಗೋಪುರಗಳ ಸ್ಫೋಟಿಸುವವರೆಗೂ ವಿಕ್ಟರ್ ಒಬ್ಬ ದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿಯಾಗಿಯೇ ಹೆಸರು ಮಾಡಿದ್ದ.
ಅಮೆರಿಕ ಬಲೆಗೆ ಬಿದ್ದ ವಿಕ್ಟರ್ ಬೌಟ್: ಇಷ್ಟೊಂದು ದೊಡ್ಡ ಜಾಲವನ್ನು ಹೊಂದಿದ್ದ ವಿಕ್ಟರ್ ಬೌಟ್ ಬಂಧನಕ್ಕೆ ಅಮೆರಿಕ ಬಲೆ ಹಾಕಿತ್ತು. ಕೊನೆಗೆ 2008ರಲ್ಲಿ ಥೈಲ್ಯಾಂಡ್‌ನಲ್ಲಿ ಅಮೆರಿಕ ಮಾದಕವಸ್ತು ಜಾರಿ ಸಂಸ್ಥೆಯ ಅಧಿಕಾರಿಗಳು ಈತನ ಬಂಧಿಸುವಲ್ಲಿ ಯಶ ಕಂಡಿದ್ದರು.
ಕೊಲಂಬಿಯಾದ ಬಂಡುಕೋರರ ರೂಪದಲ್ಲಿ ವಿಕ್ಟರ್ ಬೌಟ್ ಬಳಿ ಶಸ್ತ್ರಾಸ್ತ್ರ ಖರೀದಿ ಹೆಸರಲ್ಲಿ ಅಮೆರಿಕ ಅಧಿಕಾರಿಗಳು ಬಲೆ ಹಾಕಿದ್ದರು. ಕೊಲಂಬಿಯಾದಲ್ಲಿ ಅಮೆರಿಕದ ಹೆಲಿಕಾಪ್ಟರ್‌ಗಳನ್ನು ಉರುಳಿಸಲು ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ಈತನ ಬಳಿಗೆ ಹೋಗಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದರು. ನಂತರ 2010ರಲ್ಲಿ ವಿಕ್ಟರ್ ಬೌಟ್ನ ಅಮೆರಿಕಕ್ಕೆ ಸ್ಥಳಾಂತರ ಮಾಡಲಾಗಿತ್ತು. 2012ರಲ್ಲಿ ಈತನಿಗೆ 25 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಲಾಗಿತ್ತು. ಬಂಡುಕೋರರಿಗೆ ನೂರಾರು ಕ್ಷಿಪಣಿಗಳು ಮತ್ತು 20 ಸಾವಿರ ಎಕೆ 47 ಬಂದೂಕಗಳನ್ನು ಮಾರಾಟ ಮಾಡಲು ಒಪ್ಪಿಕೊಂಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿತ್ತು.
ಸೌದಿ-ಯುಎಇ ಮಧ್ಯಸ್ಥಿಕೆ: ಇದೀಗ ಬಾಸ್ಕೆಟ್‌ಬಾಲ್ ಆಟಗಾರ್ತಿ ಬ್ರಿಟ್ನಿ ಗ್ರೈನರ್ ಬಿಡುಗಡೆಗೆ ಪ್ರತಿಯಾಗಿ ತನ್ನ ಜೈಲಿನಲ್ಲಿದ್ದ ವಿಕ್ಟರ್ ಬೌಟ್ ಬಿಡುಗಡೆಗೆ ಅಮೆರಿಕ ಒಪ್ಪಿಕೊಂಡಿದೆ. ಈ ಬಗ್ಗೆ ರಷ್ಯಾ ಮತ್ತು ಅಮೆರಿಕ ನಡುವಿನ ಕೈದಿಗಳ ವಿನಿಮಯ ಒಪ್ಪಂದಕ್ಕೆ ಸೌದಿ ಮತ್ತು ಯುಎಇ ಮಧ್ಯಸ್ಥಿಕೆ ವಹಿಸಿದೆ. ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಅಮೆರಿಕ ಮತ್ತು ರಷ್ಯಾ ನಡುವಿನ ಈ ಒಪ್ಪಂದವನ್ನು ಮುಕ್ತಾಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಾಷಿಂಗ್ಟನ್‌ನಿಂದ ಖಾಸಗಿ ವಿಮಾನದಲ್ಲಿ ವಿಕ್ಟರ್ ಬೌಟ್ನನ್ನು ಅಬುಧಾಬಿಗೆ ಕರೆ ತರಲಾಗಿದೆ. ರಷ್ಯಾದಿಂದ ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಬ್ರಿಟ್ನಿ ಗ್ರೈನರ್ರನ್ನೂ ಅಬುಧಾಬಿಗೆ ಕರೆ ತರಲಾಗಿದೆ. ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನೂ ವಿನಿಮಯ ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ರಷ್ಯಾದ ಮಾಧ್ಯಮ ಸಂಸ್ಥೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವೀಸಾ ನೇಮಕಾತಿ ವಿಳಂಬ ಸಮಸ್ಯೆಗೆ ಶೀಘ್ರ ಪರಿಹಾರ: ಅಮೆರಿಕ ಭರವಸೆ