ಕೀವ್ (ಉಕ್ರೇನ್): ಉಕ್ರೇನ್‌ನ ವಿದ್ಯುತ್ ಕೇಂದ್ರಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ ಮಾಡಿದ್ದು, ಇದರಿಂದ ಉಕ್ರೇನ್‌ನಾದ್ಯಂತ ವ್ಯಾಪಕ ವಿದ್ಯುತ್ ನಿಲುಗಡೆ ಉಂಟಾಗಿದೆ. ಕೀವ್ ಪಡೆಗಳು ತ್ವರಿತ ಪ್ರತಿದಾಳಿಯನ್ನು ನಡೆಸಿ ಈಶಾನ್ಯ ಭಾಗದಲ್ಲಿ ಆಕ್ರಮಿಸಿಕೊಂಡಿದ್ದ ಭೂಪ್ರದೇಶದಿಂದ ರಷ್ಯಾ ಸೈನ್ಯವನ್ನು ಹಿಮ್ಮೆಟ್ಟಿಸಿದ ನಂತರ ರಷ್ಯಾ ಈ ದಾಳಿ ನಡೆಸಿದೆ.
ಭಾನುವಾರ ನಡೆದ ಬಾಂಬ್ ದಾಳಿಗಳ ಕಾರಣದಿಂದ ಖಾರ್ಕಿವ್‌ನ ಪಶ್ಚಿಮ ಹೊರವಲಯದಲ್ಲಿರುವ ವಿದ್ಯುತ್ ಕೇಂದ್ರದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಈ ದಾಳಿಯಲ್ಲಿ ಕನಿಷ್ಠ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ನಾಗರಿಕ ನೆಲೆಗಳ ಮೇಲೆ ಉದ್ದೇಶಪೂರ್ವಕವಾಗಿ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವ ರಷ್ಯಾದ ಈ ಕ್ರಮ ಭಯೋತ್ಪಾದನೆಯ ಕೃತ್ಯ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ.
ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ಭಾನುವಾರ ರಾತ್ರಿ ವಿದ್ಯುತ್ ಕಡಿತಗೊಂಡು, ಬೀದಿಗಳಲ್ಲೆಲ್ಲ ಕತ್ತಲೆ ಆವರಿಸಿತ್ತು. ಪಾದಚಾರಿಗಳು ಫ್ಲ್ಯಾಷ್‌ಲೈಟ್‌ಗಳು ಅಥವಾ ಮೊಬೈಲ್ ಫೋನ್‌ಗಳನ್ನು ಬಳಸಿ ಅದರ ಬೆಳಕಿನಲ್ಲಿ ಸಂಚರಿಸಿದರು. ಕಾರುಗಳ ಸಂಚಾರಕ್ಕೆ ಕೂಡ ಅಡ್ಡಿಯಾಯಿತು.
ಮತ್ತೊಂದೆಡೆ, ರಷ್ಯಾ-ಆಕ್ರಮಿತ ದಕ್ಷಿಣ ಭಾಗದಲ್ಲಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಲಾಗಿದೆ. ಇದರ ಬಳಿಯೇ ಸದ್ಯ ಹೋರಾಟ ನಡೆಯುತ್ತಿರುವುದರಿಂದ ವಿಕಿರಣ ದುರಂತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಾವರವನ್ನು ಬಂದ್ ಮಾಡಲಾಗಿದೆ.
ಖಾರ್ಕಿವ್ ಪ್ರದೇಶದಲ್ಲಿನ ರಷ್ಯಾ-ಆಕ್ರಮಿತ ಪ್ರದೇಶಗಳನ್ನು ಮರುಪಡೆಯಲು ಕೀವ್ ಪಡೆಗಳು ಪ್ರಬಲ ಹೋರಾಟ ನಡೆಸಿದ್ದರಿಂದ, ಮಾಸ್ಕೊ ಪಡೆಗಳು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳನ್ನು ಬಿಟ್ಟು ಅಲ್ಲಿಂದ ಹಿಂದೆ ಸರಿದಿವೆ. ಯುದ್ಧ ಆರಂಭಗೊಂಡು ಭಾನುವಾರ 200ನೇ ದಿನವಾಗಿರುವುದು ಗಮನಾರ್ಹ.
ಸೆಪ್ಟೆಂಬರ್ ಆರಂಭದಲ್ಲಿ ಕೀವ್ ಪಡೆಗಳಿಂದ ಪ್ರತಿದಾಳಿ ಪ್ರಾರಂಭವಾದಾಗಿನಿಂದ ಅದರ ಪಡೆಗಳು ಸುಮಾರು 3,000 ಚದರ ಕಿಲೋಮೀಟರ್ (1,160 ಚದರ ಮೈಲುಗಳು) ಪ್ರದೇಶವನ್ನು ಪುನಃ ವಶಪಡಿಸಿಕೊಂಡಿವೆ. ರಷ್ಯಾದ ಗಡಿಯಿಂದ ಉಕ್ರೇನಿಯನ್ ಪಡೆಗಳು ಕೇವಲ 50 ಕಿಲೋಮೀಟರ್ (ಸುಮಾರು 30 ಮೈಲುಗಳು) ದೂರದಲ್ಲಿವೆ ಎಂದು ಉಕ್ರೇನ್‌ನ ಸೇನಾ ಮುಖ್ಯಸ್ಥ ಜನರಲ್ ವ್ಯಾಲೆರಿ ಜಲುಜ್ನಿ ಹೇಳಿದರು.
ಇದನ್ನೂ ಓದಿ: ಚೀನಾ-ತೈವಾನ್ ಬಿಕ್ಕಟ್ಟು: ದ್ವೀಪ ರಾಷ್ಟ್ರಕ್ಕೆ ಅಮೆರಿಕದ ಶಸ್ತ್ರಾಸ್ತ್ರ ಬಲ