ಹಾಂಗ್ ಕಾಂಗ್ : ಪ್ರಪಂಚದಾದ್ಯಂತದ ವಿವಿಧ ಗೋಪುರಗಳು ಹಾಗೂ ಗಗನಚುಂಬಿ ಕಟ್ಟಡಗಳನ್ನು ಏರಿ ಹೆಸರುವಾಸಿಯಾದ 30 ವರ್ಷದ ಫ್ರೆಂಚ್ ಡೇರ್‌ಡೆವಿಲ್ ಸ್ಟಂಟ್ ಮ್ಯಾನ್ ರೆಮಿ ಲುಸಿಡಿ ಅವರು 68 ಮಹಡಿಗಳ ಹಾಂಗ್ ಕಾಂಗ್ ಗಗನಚುಂಬಿ ಕಟ್ಟಡದ ಮೇಲಿನಿಂದ 721 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ 'ರೆಮಿ ಎನಿಗ್ಮಾ' (Remi Enigma) ಎಂದು ಕರೆಯಲ್ಪಡುವ ಲುಸಿಡಿ 721 ಅಡಿ ಟ್ರೆಗುಂಟರ್ ಟವರ್‌ನ 68 ನೇ ಮಹಡಿಯನ್ನು ತಲುಪಿದ್ದರು. ಆದರೆ 68ನೇ ಮಹಡಿಯವರೆಗೆ ಹತ್ತಿದ ರೆಮಿ ಲುಸಿಡಿ ಅಲ್ಲಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ರೆಗುಂಟರ್ ಟವರ್ ಇದು ಹಾಂಗ್ ಕಾಂಗ್‌ನ ಎತ್ತರದ ವಸತಿ ಕಟ್ಟಡವಾಗಿದೆ.
ಡೇರ್‌ಡೆವಿಲ್ ಲುಸಿಡಿ ಕಟ್ಟಡವನ್ನು ಹತ್ತುವ ಸಂದರ್ಭದಲ್ಲಿ 68ನೇ ಮಹಡಿಯ ಪೆಂಟ್ಹೌಸ್ ಗೋಡೆಯಿಂದ ಮುಂದೆ ಹತ್ತಲಾಗದೆ ಪರದಾಡಿದ್ದರು. ಈ ಸಂದರ್ಭದಲ್ಲಿ ಮನೆಯೊಳಗೆ ಹೋಗುವ ಸಲುವಾಗಿ ಕಿಟಕಿಯ ಬಾಗಿಲು ತಟ್ಟಿದ್ದರು. ಆದರೆ ಮನೆಯಲ್ಲಿನವರು ಬಂದು ಕಿಟಕಿ ತೆರೆಯುವ ಮೊದಲೇ ಅವರು ಅಲ್ಲಿಂದ ಕೆಳಕ್ಕೆ ಬಿದ್ದರು. ಘಟನೆ ನಡೆದ ದಿನವಾದ ಜುಲೈ 27 ರಂದು ಲುಸಿಡಿ ಸಂಜೆ 7.30 ಕ್ಕೆ ಕಟ್ಟಡದ ಬಳಿ ಬಂದಿದ್ದರು. ಕಟ್ಟಡದ 40ನೇ ಮಹಡಿಯಲ್ಲಿನ ತನ್ನ ಸ್ನೇಹಿತನ ಮನೆಗೆ ಹೋಗಬೇಕಿದೆ ಎಂದು ಅವರು ಸ್ಥಳದಲ್ಲಿನ ಸೆಕ್ಯೂರಿಟಿ ಗಾರ್ಡ್ಗೆ ಹೇಳಿದ್ದರು.
ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯು ಲುಸಿಡಿಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ಅವರು ಅದಾಗಲೇ ಲಿಫ್ಟ್ ಮೂಲಕ 49 ನೇ ಮಹಡಿಗೆ ತಲುಪಿದ್ದರು. ಆತನನ್ನು ಹಿಂಬಾಲಿಸಿದ ಭದ್ರತಾ ಸಿಬ್ಬಂದಿಗೆ ಟೆರೇಸ್ಗೆ ಹೋಗುವ ಬಾಗಿಲು ತೆರೆದಿದ್ದು ಕಾಣಿಸಿತ್ತು. ಆದರೆ ಲುಸಿಡಿ ಮಾತ್ರ ಎಲ್ಲಿಯೂ ಕಾಣಿಸಲಿಲ್ಲ.
ಲುಸಿಡಿ 49ನೇ ಮಹಡಿಯವರೆಗೂ ಲಿಫ್ಟ್ನಲ್ಲಿ ಹೋಗಿದ್ದು ಸಿಸಿಟಿವಿಗಳಲ್ಲಿ ಕಾಣಿಸಿದೆ. ಅಲ್ಲಿಂದ ಮುಂದಕ್ಕೆ ಅವರು 68ನೇ ಮಹಡಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಮಾಳಿಗೆಯ ಮೇಲೆ ಹೋಗುವ ಬಾಗಿಲು ಮುಚ್ಚಿದ್ದರೂ ಅದನ್ನು ಬಲವಂತವಾಗಿ ತೆರೆದು ಹೊರಗೆ ಹೋದ ಅವರು ಕಟ್ಟಡವನ್ನು ಹೊರಗಿನಿಂದ ಏರಲಾರಂಭಿದ್ದರು. ತಮ್ಮ ಸಾವಿಗೆ ಒಂದು ದಿನ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ರೆಮಿ ಎನಿಗ್ಮಾ ಎಂಬ ಹೆಸರಿನಲ್ಲಿ ಹಾಂಗ್ ಕಾಂಗ್‌ನಲ್ಲಿನ ಎತ್ತರದ ಕಟ್ಟಡಗಳ ಚಿತ್ರವನ್ನು ಲುಸಿಡಿ ಪೋಸ್ಟ್ ಮಾಡಿದ್ದರು.
ಲುಸಿಡಿ ಕೊನೆಯದಾಗಿ ರಾತ್ರಿ 7:38 ಕ್ಕೆ ಜೀವಂತವಾಗಿ ಕಾಣಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 68ನೇ ಮಹಡಿಯಿಂದ ಬಿದ್ದ ಲುಸಿಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರಿಗೆ ಅವರ ಕ್ಯಾಮರಾ ಸಿಕ್ಕಿದ್ದು, ಅದರಲ್ಲಿ ಅವರು ಮಾಡಿದ ಡೇರ್ ಡೆವಿಲ್ ಸ್ಟಂಟ್ಗಳ ವೀಡಿಯೊಗಳಿವೆ. ಲುಸಿಡಿ ಅವರು ಹಾಂಗ್ ಕಾಂಗ್‌ನ ಹಾಸ್ಟೆಲ್ ಒಂದರಲ್ಲಿ ತಂಗಿದ್ದರು. ರಜಾಕಾಲ ಕಳೆಯಲು ಅವರು ಹಾಂಗ್ಕಾಂಗ್ಗೆ ಆಗಮಿಸಿದ್ದರು ಎನ್ನಲಾಗಿದೆ. ಲುಸಿಡಿ ವಾಸಿಸುತ್ತಿದ್ದ ಹಾಸ್ಟೆಲ್‌ನ ಮಾಲೀಕರಾದ ಗುರ್ಜಿತ್ ಕೌರ್ ಅವರನ್ನು ಗುರುತಿಸಿದ್ದು, ಲುಸಿಡಿ ಅತ್ಯಂತ ಸ್ನೇಹಪರ ಮತ್ತು ವಿನಮ್ರ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : 12ನೇ ಬರ್ತ್ಡೇಯಂದು ರಿಟೈರ್ಮೆಂಟ್ ಪಾರ್ಟಿ; ಇದು ಮಿಲಿಯನೇರ್ ಬಾಲಕಿಯ ಸಾಧನೆ!