ಕೊಲಂಬೋ: ತೀವ್ರ ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರಿ ಭದ್ರತೆಯ ಮಧ್ಯೆ ಇಂದು ದೇಶದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಇಂದೇ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದ್ದು ಹಂಗಾಮಿ ಅಧ್ಯಕ್ಷರಾಗಿದ್ದ ರಾನಿಲ್ ವಿಕ್ರಮಸಿಂಘೆ ರಾಷ್ಟ್ರದ 9ನೇ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಸಂಸದರಾದ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಸೋಲು ಅನುಭವಿಸಿದ್ದಾರೆ.
ಶ್ರೀಲಂಕಾದ ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ಜನರು ದಂಗೆ ಎದ್ದ ಕಾರಣ ದೇಶ ಬಿಟ್ಟು ಪರಾರಿಯಾಗಿದ್ದಲ್ಲದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿದ್ದರು.
ಇಂದು ಸಂಸತ್ತಿನಲ್ಲಿ ಬಿಗಿ ಬಂದೋಬಸ್ತ್ನಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ವಿಕ್ರಮಸಿಂಘೆಗೆ ಅಧಿಕ ಮತಗಳು ಬಿದ್ದವು. ಇನ್ನುಳಿದಂತೆ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಅಲ್ಪ ಮತ ಗಳಿಸಿದರು. ಪ್ರತಿಪಕ್ಷಗಳ ಮುಖಂಡ ಸಜಿತ್ ಪ್ರೇಮದಾಸ ಮತದಾನಕ್ಕೂ ಮೊದಲೇ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದಿದ್ದರು. ಇಂದು ನಡೆದ ಮತದಾನದ ವೇಳೆ ಸದನದೊಳಗೆ ಸಂಸದರಿಗೆ ಮೊಬೈಲ್ ತರುವುದಕ್ಕೂ ಅವಕಾಶ ನಿರಾಕರಿಸಲಾಗಿತ್ತು.
ನನ್ನ ಮುಂದೆ ದೊಡ್ಡ ಸವಾಲಿದೆ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ರಾನಿಲ್ ವಿಕ್ರಮಸಿಂಘೆ, ನನ್ನ ಮುಂದೆ ದೊಡ್ಡ ಸವಾಲಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ರಾಷ್ಟ್ರವನ್ನು ಮತ್ತೆ ಕಟ್ಟಬೇಕಿದೆ. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಇದರಿಂದ ಹೊರಬರಲು ಜನರು ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.
ಕೆಲ ದಿನಗಳ ಹಿಂದೆ ಲಂಕಾದಲ್ಲಿ ಜನ ದಂಗೆ ಎದ್ದು ಅಧ್ಯಕ್ಷರ ನಿವಾಸವನ್ನು ಪ್ರವೇಶಿಸಿ ಪ್ರತಿಭಟನೆ ಮಾಡಿದ್ದರು. ಅಲ್ಲಿನ ವೈಭೋಗವನ್ನು ಕಂಡು ಜನರೇ ದಂಗಾಗಿದ್ದರು. ಅಲ್ಲದೇ, ಅಧ್ಯಕ್ಷರ ಬಳಕೆಗೆ ಇದ್ದ ಕುರ್ಚಿಗಳು, ಈಜುಕೊಳ ಸೇರಿದಂತೆ ಎಲ್ಲವನ್ನು ಜನರು ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು.
ಇದನ್ನೂ ಓದಿ: ತಾಯಿಗೆ ಅನಾರೋಗ್ಯವೆಂದು ನಾಲ್ವರು ಮಹಿಳಾ ಶಾಸಕರಿಗೆ ವಂಚಿಸಿದ ಪುಣೆ ಯುವಕ!