ಬಿಷ್ಕೆಕ್ (ಕಿರ್ಗಿಸ್ತಾನ್): ಹಮಾಸ್‌ನ ದಾಳಿಯ ವಿರುದ್ಧ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಹಕ್ಕು ಇಸ್ರೇಲ್ಗೆ ಇದೆ. ಅದೇ ಗಳಿಗೆಯಲಿ ಪ್ಯಾಲಿಸ್ಟೀನ್ ಸಹ ಸ್ವತಂತ್ರ ದೇಶವಾಗಿದ್ದು, ಪೂರ್ವ ಜೆರುಸೆಲೇಂ ಅದರ ರಾಜಧಾನಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ - ಸಿಐಎಸ್ ಶೃಂಗಸಭೆಯಲ್ಲಿ ಮಾತನಾಡಿದ ಪುಟಿನ್, "ಪ್ಯಾಲೆಸ್ತೀನ್ - ಇಸ್ರೇಲಿ ಸಂಘರ್ಷಕ್ಕೆ ಸಂಧಾನದ ಮಾರ್ಗಗಳನ್ನು ಹೊರತು ಪಡಿಸಿ, ಇನ್ಯಾವುದೇ ಪರಿಹಾರಗಳಿಲ್ಲ ಎಂದರು.
" ವಿಶ್ವಸಂಸ್ಥೆಯ ಸೂತ್ರದಂತೆ ಸಂಧಾನದ ಗುರಿಯು ಎರಡು - ರಾಜ್ಯಗಳ ರಚನೆಯ ಸೂತ್ರದಂತಿರಬೇಕು. ವಿಶ್ವಸಂಸ್ಥೆಯ ಸೂತ್ರವೂ ಪ್ಯಾಲಿಸ್ಟೀನ್ ಪೂರ್ವ ಜೆರುಸಲೆಮ್ ತನ್ನ ರಾಜಧಾನಿಯಾಗಿ ಮಾಡಿಕೊಂಡು ಸ್ವತಂತ್ರ ದೇಶವಾಗಿ ರಚನೆ ಆಗುವುದನ್ನು ಸೂಚಿಸುತ್ತದೆ. ಇಸ್ರೇಲ್ನೊಂದಿಗೆ ಶಾಂತಿ ಮತ್ತು ಭದ್ರತೆಯಲ್ಲಿ ಸಹಬಾಳ್ವೆ ನಡೆಸಬೇಕು ಎನ್ನುವುದು ವಿಶ್ವಸಂಸ್ಥೆಯ ಆಶಯವಾಗಿದೆ. ಅದು ಸಹಜ ಕೂಡಾ. ಇನ್ನು ಹಮಾಸ್ ದಾಳಿಯಿಂದ ರಕ್ಷಣೆ ಮಾಡಿಕೊಳ್ಳುವ ಎಲ್ಲ ಹಕ್ಕು ಇಸ್ರೇಲ್ಗೆ ಇದೆ. ಅದು ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಅಷ್ಟೇ ಅಲ್ಲ ತನ್ನ ಅಸ್ತಿತ್ವ ಖಚಿತಪಡಿಸಿಕೊಳ್ಳುವ ಹಕ್ಕನ್ನೂ ಹೊಂದಿದೆ" ಎಂದು ಪುಟಿನ್ ಶೃಂಗಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಈಗ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವ ಅಗತ್ಯ ಇದೆ‘‘ ಎಂದು ಅವರು ಹೇಳಿದ್ದಾರೆ.
" ನನ್ನ ಪ್ರಕಾರ, ಈ ಪರಿಸ್ಥಿತಿಯಲ್ಲಿ ಮತ್ತು ಈ ನಿರ್ದಿಷ್ಟ ಸ್ಥಳದಲ್ಲಿ ಎರಡೂ ರಾಷ್ಟ್ರಗಳಿಗೆ ಪರ್ಯಾಯ ಮಾರ್ಗಗಳಿಲ್ಲ" ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ. ರಷ್ಯಾ - ಉಕ್ರೇನ್ ಸಂಘರ್ಷದ ಬಳಿಕ ಕಿರ್ಗಿಸ್ತಾನ್‌ಗೆ ಪುಟಿನ್ ಅವರ ಮೊದಲ ಭೇಟಿ ಇದಾಗಿದೆ ಎಂದು ಹೇಳಲಾಗಿದೆ. ಆಪಾದಿತ ಯುದ್ಧ ಅಪರಾಧಗಳಿಗಾಗಿ ಅಂತಾರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ ಹೊರಡಿಸಿದ ನಂತರದ ವಿದೇಶಿ ಪ್ರವಾಸ ಇದಾಗಿದೆ.
ಹಿಂದಿನ ಸೋವಿಯತ್ ಗಣರಾಜ್ಯಗಳನ್ನು ಒಳಗೊಂಡಿರುವ ಪ್ರಾದೇಶಿಕ ಸಂಸ್ಥೆಯಾದ CIS ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಿದ್ದು, ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರದೇಶದಲ್ಲಿ ರಷ್ಯಾದ ಪ್ರಭಾವ ಕಡಿಮೆಯಾಗುತ್ತಿದೆ ಎನ್ನುವ ಚರ್ಚೆಗಳ ಮಧ್ಯೆ ಪುಟಿನ್ ಅವರ ಅಂತಾರಾಷ್ಟ್ರೀಯ ಉಪಸ್ಥಿತಿ ಇದಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
2022 ರ ಆರಂಭದಲ್ಲಿ ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಪುಟಿನ್ ಹೆಚ್ಚು ವಿದೇಶಿ ಪ್ರವಾಸಗಳನ್ನು ಮಾಡಿಲ್ಲ. ಹೀಗಾಗಿ ಅವರು ಜಿ- 20 ಶೃಂಗಸಭೆಯಿಂದಲೂ ದೂರು ಉಳಿದಿದ್ದರು. ಇನ್ನು ಅವರು ಮುಂದಿನ ವಾರ ಬೀಜಿಂಗ್ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಬೀಜಿಂಗ್‌ನಲ್ಲಿ ಮೂರನೇ ಬೆಲ್ಟ್ ಮತ್ತು ರೋಡ್ ಫೋರಂ ಸಭೆ ಇರುವ ಹಿನ್ನೆಯಲ್ಲಿ ಚೀನಾಕ್ಕೆ ಈ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ಕಿರ್ಗಿಸ್ತಾನ್ ಮತ್ತು ಚೀನಾ ICC ಸದಸ್ಯರಲ್ಲ ಮತ್ತು ಅದರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಕಿರ್ಗಿಸ್ ಅಧ್ಯಕ್ಷ ಸದಿರ್ ಜಪರೋವ್ ಅವರೊಂದಿಗೆ ಪುಟಿನ್ ಇದೇ ವೇಳೆ ಸಭೆ ನಡೆಸಿದರು. ರಷ್ಯಾದ-ಕಿರ್ಗಿಸ್ ವ್ಯಾಪಾರದಲ್ಲಿನ ಗಮನಾರ್ಹ ಬೆಳವಣಿಗೆಯನ್ನು ಪುಟಿನ್ ಇದೇ ವೇಳೆ ಶ್ಲಾಘಿಸಿದರು. ಇದೇ ವೇಳೆ ಮಾತನಾಡಿದ ಪುಟಿನ್,
"ಆಹ್ವಾನಕ್ಕಾಗಿ ನಾನು ಅಧ್ಯಕ್ಷರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಇಲ್ಲಿ ಇರಲು ಉತ್ತಮ ಕಾರಣಗಳಿವೆ ಎಂದು ಪುಟಿನ್ ಹೇಳಿದರು. ಕಳೆದ ಮಾರ್ಚ್‌ನಲ್ಲಿ, ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡೀಪಾರು ಮಾಡಿದ ಆರೋಪದ ಮೇಲೆ ಪುಟಿನ್ ಮತ್ತು ರಷ್ಯಾದ ಹಕ್ಕುಗಳ ಕಮಿಷನರ್ ಮರಿಯಾ ಲ್ವೊವಾ - ಬೆಲೋವಾ ಅವರಿಗೆ ICC ವಾರಂಟ್ ಹೊರಡಿಸಿತು. ಐಸಿಸಿಯ ಈ ವಾರಂಟ್ ಅನ್ನು ರಷ್ಯಾ, "ಕಾನೂನುಬಾಹಿರ" ಎಂದು ತಿರಸ್ಕರಿಸಿತ್ತು. (ANI)
ಇದನ್ನು ಓದಿ: ಉಗ್ರರು ಕೊಲೆಗೈದ ಪುಟ್ಟ ಮಕ್ಕಳ ಫೋಟೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ; ಐಸಿಸ್‌ನಂತೆ ಹಮಾಸ್ ರಕ್ಕಸರ ನಾಶಕ್ಕೆ ಶಪಥ