ದೆಹಲಿ: ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಕುರಿತಾಗಿ ಮಾಜಿ ಬ್ರಿಟಿಷ್ ಗುಪ್ತಚರರೊಬ್ಬರು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಕುರಿತು ಬರೆದಿದ್ದ ಹಾಗೂ 2016ರ ಅಮೆರಿಕದ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವಿತ್ತು ಎಂದು ಆರೋಪಿಸಿದ್ದ ಕ್ರಿಸ್ಟೋಫರ್ ಸ್ಟೀಲ್, ರಷ್ಯಾ ಮತ್ತು ಇತರೆಡೆಯ ಮೂಲಗಳಿಂದ ನಾವು ಕೇಳುತ್ತಿರುವ ಪುಟಿನ್ ಅನಾರೋಗ್ಯದ ಸಂಗತಿಗಳು ನಿಜವಾಗಿವೆ. ಅವರು ತೀವ್ರ ಸ್ವರೂಪದ ಖಾಯಿಲೆಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಪುಟಿನ್ಗೆ ಅವರನ್ನು ಕಾಡುತ್ತಿರುವ ಅನಾರೋಗ್ಯವು ನಿಖರವಾಗಿ ಏನೆಂದು ಗೊತ್ತಾಗಿಲ್ಲ. ಆದ್ರೆ ಇದು ಗುಣಪಡಿಸಲಾಗದ ಅಥವಾ ಟರ್ಮಿನಲ್ ಯಾವುದಾದರೂ ಆಗಿರಬಹುದು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಪುಟಿನ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ರಷ್ಯಾದ ನಾಯಕನೊಂದಿಗೆ ನಿಕಟ ಸಂಬಂಧ ಹೊಂದಿರುವ ಹೆಸರಿಸದ ಸರ್ಕಾರದ ಪ್ರತಿನಿಧಿಯೊಬ್ಬರು ಹೇಳಿರುವುದನ್ನು ಅಮೆರಿಕದ ನಿಯತಕಾಲಿಕೆ ವರದಿ ಮಾಡಿದೆ.
ಇದನ್ನೂ ಓದಿ: ಪುಟಿನ್ಗೆ ಕ್ಯಾನ್ಸರ್ ಚಿಕಿತ್ಸೆ; ಕೆಲದಿನಗಳ ಮಟ್ಟಿಗೆ ಆಪ್ತನಿಗೆ ಅಧಿಕಾರ ಹಸ್ತಾಂತರ ಸಾಧ್ಯತೆ
ಉಕ್ರೇನ್ ಯುದ್ಧಾರಂಭದ ನಂತರ ರಷ್ಯಾಧ್ಯಕ್ಷರ ಅನಾರೋಗ್ಯದ ಕುರಿತಾಗಿ ಹಲವು ಊಹಾಪೋಹಗಳು ಹರಡುತ್ತಿವೆ. ಕಳೆದ ವಾರ ರಷ್ಯಾ ವಿಜಯ ದಿನಾಚರಣೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಪುಟಿನ್ ನಿಶಕ್ತರಾಗಿರುವಂತೆ ಕಂಡುಬಂದಿದ್ದರು. ಈ ಕುರಿತ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.