ವಾಷಿಂಗ್ಟನ್: ಟಾಟಾ ಗ್ರೂಫ್ನ ಏರ್ ಇಂಡಿಯಾ ಮತ್ತು ಬೋಯಿಂಗ್ ಮಧ್ಯೆ ನಡೆದ ವಿಮಾನ ಖರೀದಿ ಒಪ್ಪಂದದಿಂದ ಅಮೆರಿಕದ 10 ಲಕ್ಷ ಮಂದಿಗೆ ಉದ್ಯೋಗ ದೊರಕಲಿದೆ. ಇದೊಂದು ಉಭಯ ದೇಶಗಳ ಹೆಗ್ಗುರುತಿನ ಒಪ್ಪಂದವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಸಂತಸ ವ್ಯಕ್ತಪಡಿಸಿದ್ದಾರೆ. ಟಾಟಾ ಗ್ರೂಫ್ನ ಏರ್ ಇಂಡಿಯಾ ಮತ್ತು ಬೋಯಿಂಗ್ ಮಧ್ಯೆ 34 ಬಿಲಿಯನ್ ಡಾಲರ್ಗಳ 220 ವಿಮಾನ ಖರೀದಿ ಒಪ್ಪಂದದ ಬಳಿಕ ಅಮೆರಿಕದ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಈ ಐತಿಹಾಸಿಕ ಒಪ್ಪಂದದಿಂದ ಅಮೆರಿಕದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. 44 ರಾಜ್ಯಗಳ ಜನರು ಕೆಲಸ ಪಡೆಯಲಿದ್ದಾರೆ. ಈ ಒಪ್ಪಂದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಎಂದು ಬೈಡನ್ ಇದೇ ವೇಳೆ ಹೇಳಿದ್ದಾರೆ.
ಬೋಯಿಂಗ್ ಮತ್ತು ಏರ್ ಇಂಡಿಯಾ ನಡುವೆ ಒಪ್ಪಂದದಂತೆ 190 B737 MAX, 20 B787, ಮತ್ತು 10 B777X ಪ್ರಕಾರದ 220 ವಿಮಾನಗಳಿಗೆ ಭಾರತ ಆರ್ಡರ್ ನೀಡಿದೆ. ಇದರ ಬೆಲೆ 34 ಅಮೆರಿಕನ್ ಡಾಲರ್ ಆಗಿರಲಿದೆ. ಇದರೊಂದಿಗೆ ಹೆಚ್ಚುವರಿವಾಗಿ 50 ಬೋಯಿಂಗ್ 737 MAX ಮತ್ತು 20 ಬೋಯಿಂಗ್ 787 ವಿಮಾನಗಳಿಗೂ ಆರ್ಡರ್ ನೀಡಲಾಗಿದೆ. ಇದರ 45.9 ಬಿಲಿಯನ್ ಡಾಲರ್ ಒಪ್ಪಂದವಾಗಿದೆ. ಒಟ್ಟು 290 ವಿಮಾನಗಳನ್ನು ಭಾರತ ಖರೀದಿ ಮಾಡಲಿದೆ.
4 ವರ್ಷ ಕಾಲೇಜು ಪೂರ್ತಿ ಮಾಡಬೇಕಿಲ್ಲ: ಒಪ್ಪಂದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಜೋ ಬೈಡನ್, "ನಾಲ್ಕು ವರ್ಷಗಳ ಕಾಲೇಜು ಶಿಕ್ಷಣ ಪಡೆಯುವ ಅಗತ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಅಂದರೆ ಎಲ್ಲರಿಗೂ ಉದ್ಯೋಗ ಸಿಗಲಿದೆ ಎಂಬರ್ಥದಲ್ಲಿ ಬರೆದಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಮಧ್ಯೆ ನಡೆದ ಕರೆ ಸಂಭಾಷಣೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿ ಬಗ್ಗೆಯೂ ಪ್ರಸ್ತಾಪವಾಗಿದೆ. ಮೋದಿ ಜೊತೆಗೂಡಿ ಉಭಯ ದೇಶಗಳ ಮೈತ್ರಿಯನ್ನು ಬಲಪಡಿಸಲಾಗುವುದು. ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಿ, ನಮ್ಮ ನಾಗರಿಕರಿಗೆ ಉತ್ತಮ ಭವಿಷ್ಯ ನೀಡಲಾಗುವುದು ಎಂದು ಬೈಡನ್ ಇದೇ ವೇಳೆ ಹೇಳಿದ್ದಾರೆ.
ಜಾಗತಿಕವಾಗಿ ಅತಿದೊಡ್ಡ ಒಪ್ಪಂದ: ವಿಮಾನಗಳ ಖರೀದಿಗೆ ಏರ್ ಇಂಡಿಯಾ ನೀಡಿರುವ ಆರ್ಡರ್ ಡಾಲರ್ ಲೆಕ್ಕದಲ್ಲಿ ಬೋಯಿಂಗ್ಗೆ ಇದು 3ನೇ ಅತಿದೊಡ್ಡ ಮತ್ತು ವಿಮಾನಗಳ ಸಂಖ್ಯೆಯಲ್ಲಿ 2ನೇ ಅತಿದೊಡ್ಡ ಮಾರಾಟವಾಗಿದೆ. ಇದಲ್ಲದೇ ಟಾಟಾ ಫ್ರಾನ್ಸ್ನ ಏರ್ಬಸ್ ಜೊತೆಗೂ 250 ವಿಮಾನಗಳ ಖರೀದಿಗೈ ಒಪ್ಪಂದ ಮಾಡಿಕೊಂಡಿದೆ.
ಓದಿ: ಏರ್ಬಸ್ನಿಂದ 250 ವಿಮಾನ, ಬೋಯಿಂಗ್ನಿಂದ 290 ವಿಮಾನ ಖರೀದಿಗೆ ಏರ್ ಇಂಡಿಯಾ ಒಪ್ಪಂದ